ಕೃಷಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಸಿರುವ ಕೊಳ್ಳೇಗಾಲ ಮತ್ತು ಹನೂರು ಸಹಾಯಕ ಕೃಷಿ ನಿರ್ದೇಶಕರು ಹಾಗೂ ಹನೂರು ತಾಲೂಕು ಲೊಕ್ಕನಹಳ್ಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವಿರುದ್ದ ಸಮಗ್ರ ತನಿಖೆ ನಡೆಸಿ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಚಾಮರಾಜನಗರ ಜಿಲ್ಲಾ ಸಂಚಾಲಕ ಸಿ ರಾಜಣ್ಣ ಯರಿಯೂರು ಒತ್ತಾಯಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೊಳ್ಳೇಗಾಲ ಹನೂರು ತಾಲೂಕುಗಳಲ್ಲಿ 2008-09 ರಿಂದ 2023-24ನೇ ಸಾಲಿನವರೆಗೂ ಕಾರ್ಯನಿರ್ವಹಿಸಿರುವ ಅವಧಿಯಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ಅನೇಕ ಜನಪರ, ರೈತರು ಹಾಗೂ ಕೃಷಿಯೇತರರು, ಕೃಷಿ ಕಾರ್ಮಿಕರಿಗೆ ಹಾಗೂ ನಿರುದ್ಯೋಗ ಬಡ ಮಹಿಳೆಯರಿಗೆ ಅನೇಕ ಅನುಕೂಲಗಳು ಸಿಗಲೆಂದು ರೈತರು ಆರ್ಥಿಕವಾಗಿ ಸಬಲರಾಗಲು ಮಳೆ ಆಶ್ರಯ ಭೂಮಿಯಲ್ಲಿ ಅಂತರ್ಜಲ ಹೆಚ್ಚಿಸಲು ಮಣ್ಣು ಮತ್ತು ನೀರು ಸಂರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ನಾನಾ ಇಲಾಖೆಗಳ ಮೂಲಕ ಕೋಟ್ಯಾಂತರ ರೂ.ಅನುದಾನ ಬಿಡುಗಡೆ ಮಾಡಿದೆ” ಎಂದು ಹೇಳಿದರು.
“ಈ ಯೋಜನೆಗಳಲ್ಲಿ ನಡೆದಿರುವ ಎಲ್ಲ ಕಾಮಕಾರಿಗಳು ಸಂಪೂರ್ಣ ಕಳೆಪೆ ಕಾಮಗಾರಿಯಾಗಿದ್ದು, ಸಂಪೂರ್ಣ ಹಾಳಾಗಿರುತ್ತವೆ. ಕೆಲವು ಕಾಮಗಾರಿಗಳನ್ನು ಕೆಲಸ ಮಾಡದೆ ಪುಸ್ತಕ, ಪೇಪರ್‌ಗಳಲ್ಲಿ ಕೆಲಸ ತೋರಿಸಿ ನಕಲಿ ಬಿಲ್‌ಗಳನ್ನು ತಯಾರಿಸಿ ತಮಗಿಷ್ಟ ಬಂದ ಗುತ್ತಿಗೆದಾರರ ಹೆಸರಿನಲ್ಲಿ ಬಿಲ್ ಮಾಡಿಸಿ ಗುತ್ತಿಗೆದಾರರಿಗೆ ಇಂತಿಷ್ಟು ಎಂಬಂತೆ ಶೇಕಡಾವಾರು ಹಣ ನೀಡಿ, ಉಳಿಕೆ ಹಣವನ್ನು ಕೃಷಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಸಿರುವ ಕೊಳ್ಳೇಗಾಲ ಮತ್ತು ಹನೂರು ಸಹಾಯಕ ಕೃಷಿ ನಿರ್ದೇಶಕಿ ಸುಂದರಮ್ಮ ಹಾಗೂ ಹನೂರು ತಾಲೂಕು ಲೊಕ್ಕನಹಳ್ಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೆಂಕಟನಾಯಕ ಕಬಳಿಸಿದ್ದಾರೆ” ಎಂದು ಆರೋಪಿಸಿದರು.
“ತಪ್ಪಿತಸ್ಥರ ವಿರುದ್ದ ಸಮಗ್ರ ತನಿಖೆ ನಡೆಸಿ, ಅವರನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಈಗಾಗಲೇ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಯವರು ಈ ಕುರಿತು ತನಿಖೆ ಮಾಡಿಸಿ ಕ್ರಮಕೈಗೊಳ್ಳಬೇಕು” ಎಂದು ಯರಿಯೂರು ರಾಜಣ್ಣ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಯೋಜನೆ ರೂಪಿಸಿ: ಸಚಿವ ರಹೀಂ ಖಾನ್
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ನಂಜುಂಡಸ್ವಾಮಿ, ದೊರೆಸ್ವಾಮಿ (ಜಾನಿ) ತಾಲೂಕು ಸಂಚಾಲಕರುಗಳಾದ ಅನಿಲ್‌ಕುಮಾರ್ ಚಾಮರಾಜನಗರ, ಮಂಜುಸ್ವಾಮಿ ಹನೂರು, ಸುರೇಂದ್ರಕೊಳ್ಳೇಗಾಲ, ರಂಗಸ್ವಾಮಿ ಗುಂಡ್ಲುಪೇಟೆ ಇದ್ದರು.