ಕೇರಳದಲ್ಲಿ ಕೊರೋನಾ ಜೆಎನ್1 ವೈರಸ್ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ರಾಜ್ಯದಲ್ಲಿಯೂ 60 ವರ್ಷ ದಾಟಿದವರು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ರಾಜ್ಯ ಸರ್ಕಾರ ಹೇಳಿದೆ. ಈ ನಡುವೆ, ಮಂಡ್ಯ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.
ಜಿಲ್ಲೆಯ ಮದ್ದೂರಿನ 75 ವರ್ಷದ ವ್ಯಕ್ತಿಯೊಬ್ಬರಿಗೆ ಕೋವಿಡ್ ದೃಢಪಟ್ಟಿದೆ ಅದು ಜಿಎನ್1 ರೂಪಾಂತರಿ ವೈರಸ್ ಆಗಿದೆಯೇ ಎಂದು ವೈದ್ಯರು ಇನ್ನೂ ದೃಢಪಡಿಸಿಲ್ಲ.
ಕೊರೋನಾ ದೃಢಪಟ್ಟಿರುವ ವ್ಯಕ್ತಿಗೆ ಯಾವುದೇ ಪ್ರಯಾಣದ ಇತಿಹಾಸಗಳಿಲ್ಲ. ಆದರೂ, ಅವರಲ್ಲಿ ಕೊರೋನಾ ದೃಢಪಟ್ಟಿದೆ. ಅವರು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ, ಅವರಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ. ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಆತನನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
“ಸೋಂಕಿತನಿಗೆ ಕೊರೋನಾ ಸೋಂಕಿನ ಯಾವುದೇ ರೋಗಲಕ್ಷಣಗಳಿಲ್ಲ. ರೋಗಿಯ ಆರೋಗ್ಯ ಸ್ಥಿತಿ ಸಾಮಾನ್ಯವಾಗಿದೆ. ಇನ್ನು, ಜಿಲ್ಲೆಯಲ್ಲಿ ಕೊರೋನಾದಂತಹ ಪರಿಸ್ಥಿತಿಗಳನ್ನು ಎದುರಿಸಲು ಆಕ್ಸಿಜನ್ ಪ್ಲಾಂಟ್‌ಗಳನ್ನು ಸಜ್ಜುಗೊಳಿಸಲಾಗಿದೆ. ಶ್ರೀರಂಗಪಟ್ಟಣದ ಆಕ್ಸಿಜನ್ ಸ್ಥಾವರದಲ್ಲಿ ಕೆಟ್ಟು ಹೋಗಿದ್ದ ಸೆನ್ಸಾರ್ ದುರಸ್ತಿಗೆ ಕ್ರಮಕೈಗೊಳ್ಳಲಾಗಿದೆ” ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ತಿಳಿಸಿದ್ದಾರೆ.
ಕೇರಳದಲ್ಲಿ ಕೊರೋನಾ ರೂಪಾಂತರಿ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಭಾಗದಲ್ಲಿ ಕೊರೋನಾ ತಪಾಸಣೆಯನ್ನು ಆರೋಗ್ಯ ಇಲಾಖೆ ಆರಂಭಿಸಿದೆ. ಕೇರಳದಿಂದ ಬರುವವರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗುತ್ತಿದೆ.
Nice Information