ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಪರಿಹರಿಸಿ ನಮ್ಮ ತರಗತಿಗಳು ಸುಗಮವಾಗಿ ನಡೆಯುವಂತೆ ನ್ಯಾಯ ಒದಗಿಸಿ ಎಂದು ಬಾಗಲಕೋಟೆ ಜಿಲ್ಲೆಯ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ದಿ.23.11.2023ರಿಂದ ಇಲ್ಲಿಯವರೆಗೆ ನಮ್ಮ ಮಹಾವಿದ್ಯಾಲಯದಲ್ಲಿ ತರಗತಿಗಳು ನಡೆಯುತ್ತಿಲ್ಲ. ಏಕೆಂದರೆ ನಮ್ಮಲ್ಲಿ 73 ಜನ ಅತಿಥಿ ಉಪನ್ಯಾಸಕರಿದ್ದು, ಅವರು ತರಗತಿಗಳನ್ನು ಬಹಿಷ್ಕರಿಸಿ ಅನಿರ್ದಿಷ್ಠಾವದಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ. ಕಳೆದ 26ದಿನಗಳಿಂದ ನಮಗೆ ತರಗತಿಗಳು ನಡೆಯುತ್ತಿಲ್ಲ. ಇದರಿಂದ ನಮಗೆ ಶೈಕ್ಷಣಿಕ ಹಿನ್ನೇಡೆ ಆಗುತ್ತಿದೆ. ಇನ್ನೂ ನಮ್ಮ ಮೊದಲ ಹಾಗೂ 2ನೇ ಆಂತರಿಕ ಪರೀಕ್ಷೆಗಳು ನಡೆದಿಲ್ಲ ಮತ್ತು ನಮ್ಮ ಪಠ್ಯಕ್ರಮವು ಇನ್ನೂ ಒಂದು ಅಧ್ಯಾಯವು ಪೂರ್ಣಗೊಂಡಿಲ್ಲ.
ಇದೆ ರೀತಿ ಮುಂದೆ ವರೆದರೆ ನಮ್ಮ ಭವಿಷ್ಯ ಏನಾಗುತ್ತದೆ ಎಂದು ಇನ್ನೂ ವರೆಗೆ ಸರ್ಕಾರ ಚಿಂತನೆ ಮಾಡುತ್ತಿಲ್ಲ. ನಾವು ಬಡವರು ಕೂಲಿ ಕಾರ್ಮಿಕರು, ರೈತರ ಮಕ್ಕಳು, ಹಿಂದುಳಿದ ವರ್ಗಗಳ ಮಕ್ಕಳು ಹಾಗೂ ಆರ್ಥಿಕ ಪರಸ್ಥಿತಿಯಿಂದ ಹಿಂದುಳಿದ ಕುಟುಂಬದವರ ಮಕ್ಕಳಾಗಿದ್ದು ಇರುತ್ತದೆ. ಕಾರಣ ಕೂಡಲೇ ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸಿ ನಮಗೆ ನ್ಯಾಯ ಒದಗಿಸಬೇಕೆಂದು ಮನವಿ ಪತ್ರದಲ್ಲಿ ವಿದ್ಯಾರ್ಥಿಗಳು ವಿನಂತಿಸಿದ್ದಾರೆ.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ, ಭಾಗ್ಯಾ ಬೆಟಗೇರಿ, ರಾಜೇಶ್ವರಿ ಹಿರೇಮಠ, ಸವಿತಾ ಹಿರೇಮಠ, ಶಿವಲೀಲಾ ಬರಡಗಿ, ಸಂಗಮೇಶ ಅಂಬಿಗೇರ, ಮಹಾಂತೇಶಗೌಡ ವಂಕಲಕುಂಟಿ, ಕಿರಣ್ ಗಾಳಿ, ರಾಹುಲ್ ಶೆಟ್ಟರ್, ಗಣೇಶ ನಾಯಕ, ದಾದಾಪಿರ ಶಿವಳ್ಳಿ, ಅಜಿತ್ ಬರಡಗಿ, ಸಾಗರ ಸೀಮಿಕೇರಿ ಹಾಜರಿದ್ದರು.