ಬೆಳಗಾವಿಯಲ್ಲಿ ಪ್ರೇಮ ಪ್ರಕರಣದಲ್ಲಿ ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ರಾಜ್ಯವನ್ನು ‘ದುಶ್ಯಾಸನರ ರಾಜ್ಯ’ ಎಂದು ಹೈಕೋರ್ಟ್ ಕರೆದಿದೆ. ಬೆಳಗಾವಿ ಪ್ರಕರಣವನ್ನು ಖಂಡಿಸಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ಸಮಯದಲ್ಲೇ ಅಂತದ್ದೇ ಮತ್ತೊಂದು ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಒಂದೇ ಗ್ರಾಮದ, ಒಂದೇ ಸಮುದಾಯದ ಯುವಕ-ಯುವತಿ ಪ್ರೀತಿಸಿ, ಊರು ತೊರೆದು ಹೋದರೆಂಬ ಕಾರಣಕ್ಕೆ, ಯುವತಿಯ ಕುಟುಂಬಸ್ಥರು ಯುವಕನ ತಂದೆ-ತಾಯಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಘಟನೆ ಜಿಲ್ಲೆಯ ಗುಂಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನೆರೆ-ಹೊರೆಯಲ್ಲಿ ವಾಸಿಸುತ್ತಿದ್ದ ಯುವಕ-ಯುವತಿ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅವರ ಪ್ರೀತಿಗೆ ಯುವತಿಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ, ಪ್ರೇಮಿಗಳು ಸೋಮವಾರ ಊರು ಬಿಟ್ಟು ಹೋಗಿದ್ದರು.
ಇದರಿಂದ ವಿಚಲಿತರಾದ ಯುವತಿ ಕುಟುಂಬಸ್ಥರು ಯುವಕನ ತಂದೆ-ತಾಯಿ ಮೇಲೆ ಹಲ್ಲೆ ಮಾಡಿದ್ದಾರೆ. ಯುವಕನ ತಾಯಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಯುವತಿಯ ಕುಟುಂಬಸ್ಥರೂ ಕೂಡ ತಮಗೂ ಗಾಯಗಳಾಗಿವೆ ಎಂಬಂತೆ ನಟಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮದಲ್ಲಿ ಪೊಲೀಸ್ ಬಂದೋಬಸ್ ಮಾಡಲಾಗಿದೆ.