ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಕೋಟೆಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರುಡಿ ಗ್ರಾಮದ ಗುಡ್ಡ ಪ್ರದೇಶದಲ್ಲಿ ನಡೆದಿರುವ ಕಲ್ಲು ಗಣಿಗಾರಿಕೆಯ ಭಾಗವಾದ ಸಿಲ್ಕಾ ಸ್ಯಾಂಡ್ ಫ್ಯಾಕ್ಟರಿಯಿಂದ ಹೊರಸೂಸುವ ಧೂಳು ಸಮೀಪದ ಗ್ರಾಮಗಳಿಗೆ ತಲೆ ನೋವಾಗಿ ಪರಿಣಮಿಸಿದೆ.
ಫ್ಯಾಕ್ಟರಿಯ ಹತ್ತಿರದ ಮುರುಡಿ, ಖಾನಾಪೂರ ಮುಂತಾದ ಗ್ರಾಮಗಳಲ್ಲಿ ಧೂಳು ಆವರಿಸುವುದರಿಂದ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಫ್ಯಾಕ್ಟರಿ ಗುಡ್ಡದ ಮೇಲೆ 2019ರಲ್ಲಿ ಸ್ಥಾಪನೆಯಾಗಿದೆ. ಎತ್ತರವಾದ ಸ್ಥಳದಲ್ಲಿ ಇರುವುದರಿಂದ ಗಾಳಿಯ ಜೊತೆ ಧೂಳು ಹರಡುತ್ತಿದೆ.
ಕಲ್ಲನ್ನು ಗುಡ್ಡದಿಂದ ಹೊರತೆಗೆದು ಅದನ್ನು ಮಶಿನ್ ಮೂಲಕ ಪುಡಿ ಮಾಡುವುದರಿಂದ ಧೂಳು ಹರಡುತ್ತಿದೆ. ಇಲ್ಲಿ ತಯಾರಿಸುವ ಕಲ್ಲಿನ ಪುಡಿಯನ್ನು ಧಾರವಾಡ, ಸಾಂಗ್ಲಿ, ಬೆಳಗಾವಿ, ಚಿಕ್ಕೋಡಿ, ಕೊಲ್ಲಾಪುರ, ಸೊಲ್ಲಾಪುರ ಮುಂತಾದ ನಗರಗಳಿಗೆ ಗ್ಲಾಸ್ ಪ್ಯಾಕ್ಟರಿಗಳಿಗೆ ಮತ್ತು ಅಚ್ಚು ತಯಾರಿಕಾ ಕಂಪನಿಗಳಿಗೆ ಸರಬರಾಜು ಮಾಡಲಾಗುತ್ತಿದೆ.
ಮುರುಡಿ ಮತ್ತು ಖಾನಾಪೂರ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಇತ್ತೀಚಿಗೆ ಗುಳೇದಗುಡ್ಡ ತಾಲೂಕು ತಹಸೀಲ್ದಾರ್ ಮಂಗಳಾ ಎಂ. ಅವರಿಗೆ, ಖಾಸಗಿಯಾಗಿರುವ ಎಂ.ಸ್ಯಾಂಡ್ ಕ್ರಶರ್‌ನಿಂದ ಹಾರುತ್ತಿರುವ ಧೂಳಿನ ಕಣಗಳಿಂದ ಅಕ್ಕ ಪಕ್ಕದ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಅಲ್ಲದೇ ಕುಡಿಯುವ ನೀರು ಮಲೀನವಾಗುತ್ತಿದೆ. ಬೆಳೆ ಹಾಳಾಗುತ್ತಿವೆ ಎಂದು ದೂರು ನೀಡಿದ್ದಾರೆ.
ಆದರೆ, ಫ್ಯಾಕ್ಟರಿ ಈ ಧೂಳಿಗಾಗಿ ಯಾವುದೇ ಮುಂಜಾಗ್ರತಾ ಕ್ರಮ ವಹಿಸದೆ ಇರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಯಂತ್ರದ ಮೂಲಕ ಕಲ್ಲು ತೆಗೆಯುವಾಗ ಮತ್ತು ಆ ಕಲ್ಲನ್ನು ಪುಡಿ ಮಾಡುವಾಗ ಅದರಿಂದ ಹಾರುವ ಧೂಳು ಗಾಳಿಯ ಮೂಲಕ ಹರಡುತ್ತದೆ. ಅದಕ್ಕೆ ಮಾಲೀಕರು ಮುಂಜಾಗ್ರತಾ ಕ್ರಮ ವಹಿಸಿಲ್ಲ. ಕೂಡಲೇ ಅದನ್ನು ಬಂದ್ ಮಾಡಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.