ಶಿವಾಜಿ ಪ್ರತಿಮೆ ಬಳಿ ಕನ್ನಡ ಧ್ವಜವನ್ನು ಹಾಕಿದ್ದಕ್ಕೆ ಯುವಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಸಂಕೇಶ್ವರದ ಅಂಕಲಿ ಗ್ರಾಮದಲ್ಲಿ ನಡೆದಿದೆ. ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ನಾಲ್ಕು ದಿನಗಳ ಹಿಂದೆ ನಡೆದಿದೆ ಎಂದು ಸಂಕೇಶ್ವರ ಪೊಲೀಸರು ತಿಳಿಸಿದ್ದಾರೆ. ಶಿವಾಜಿ ಪ್ರತಿಮೆ ಬಳಿ ಕನ್ನಡ ಧ್ವಜ ಅಳವಡಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ. ಬಾವುಟವನ್ನು ತೆರವುಗೊಳಿಸುವಂತೆ ಒಂದು ಗುಂಪು ಒತ್ತಾಯಿಸಿ, ಗಲಾಟೆ ಮಾಡಿದೆ ಎಂದು ವರದಿಯಾಗಿದೆ.
ಬಾವುಟವನ್ನು ತೆರವುಗೊಳಿಸಲು ನಿರಾಕರಿಸಿದ ಯುವಕರ ಮೇಲೆ ಆ ಗುಂಪು ಹಲ್ಲೆ ಮಾಡಿದೆ. ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೂ, ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದರು ಎಂದು ಕನ್ನಡಪರ ಸಂಘಟನೆಗಳು ಆರೋಪಿಸಿವೆ.
ಸದ್ಯ, ಪ್ರಕರಣ ದಾಖಲಾಗಿದ್ದು, ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಂಕಲಿ ಗ್ರಾಮ ಮತ್ತು ಸಂಕೇಶ್ವರದಲ್ಲಿ ಬಿಗುವಿನ ವಾತಾವರಣವಿದೆ ಎಂದು ತಿಳಿದುಬಂದಿದೆ.