- ಜೀವನೋಪಾಯಕ್ಕಾಗಿ ಹಣ್ಣು ಮಾರುವ ಹಾಲಕ್ಕಿ ಮಹಿಳೆ
- ʼಹಾಲಕ್ಕಿ ಮಹಿಳೆಯನ್ನು ಸಂಪರ್ಕಿಸಿ ಮಾತನಾಡಿಸಲು ಅವಕಾಶ ಮಾಡಿಕೊಡಿʼ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಸ್ ನಿಲ್ದಾಣದಲ್ಲಿ ಹಣ್ಣು ಮಾರುವ ಹಾಲಕ್ಕಿ ಮಹಿಳೆಯ ಸ್ವಚ್ಛತಾ ಕಾರ್ಯವನ್ನು ಮಹೀಂದ್ರಾ ಸಂಸ್ಥೆಯ ಮಾಲೀಕ ಆನಂದ್ ಮಹೀಂದ್ರಾ ಕೊಂಡಾಡಿದ್ದಾರೆ.
“ಸದ್ದಿಲ್ಲದೆ ಸ್ವಚ್ಛ ಭಾರತದ ಪ್ರಯತ್ನವನ್ನು ಸಕಾರಗೊಳಿಸುವ ಇಂತಹವರೇ ಸ್ವಚ್ಛ ಭಾರತ್‌ನ ನಿಜವಾದ ನಾಯಕರು. ಇವರ ಕಾರ್ಯವನ್ನು ಗಮನಿಸದಿರುವುದು, ಶ್ಲಾಘಿಸದೆ ಇರುವುದು ದುರಂತ” ಎಂದು ಟ್ವೀಟ್ ಮೂಲಕ ಹಾಲಕ್ಕಿ ಮಹಿಳೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದಲ್ಲಿ ಹಾಲಕ್ಕಿ ಮಹಿಳೆಯೊಬ್ಬರು ಜೀವನೋಪಾಯಕ್ಕಾಗಿ ಪ್ರತಿನಿತ್ಯ ಎಲೆಯ ಕೊಟ್ಟೆಯಲ್ಲಿ ನೇರಳೆ ಹಣ್ಣುಗಳನ್ನು ತಂದು ಮಾರಾಟ ಮಾಡುತ್ತಾರೆ. ಮಹಿಳೆಯಿಂದ ನೇರಳೆ ಹಣ್ಣು ಖರೀದಿಸುವ ಪ್ರಯಾಣಿಕರು ಹಣ್ಣುಗಳನ್ನು ತಿಂದು, ಎಲೆಯನ್ನು ಬಸ್‌ನ ಕಿಟಕಿಯಿಂದ ಹೊರಗೆ ಬಿಸಾಡಿ ತೆರಳುತ್ತಾರೆ.
ಹೀಗೆ ಪ್ರಯಾಣಿಕರು ಎಸೆದ ಎಲೆಗಳನ್ನು ಹಾಲಕ್ಕಿ ಮಹಿಳೆ ಆರಿಸಿ ತಂದು ಕಸದ ಬುಟ್ಟಿಗೆ ಹಾಕುವುದನ್ನು ರೂಢಿಸಿಕೊಂಡಿದ್ದಾರೆ. ಹೀಗೆ ಮಹಿಳೆ ಎಲೆ ಹೆಕ್ಕುತ್ತಿದ್ದ ವೇಳೆ ಆದರ್ಶ ಹೆಗಡೆ ಎಂಬುವವರು ಮೊಬೈಲ್‌ನಲ್ಲಿ ವಿಡಿಯೋ ಮಾಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಧಾನಸಭಾ ಚುನಾವಣೆ | ಮತದಾನ ಬಹಿಷ್ಕಾರ; ಬ್ಯಾನರ್ ಅಳವಡಿಸಿ ಗ್ರಾಮಸ್ಥರ ಆಕ್ರೋಶ
ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಹಾಲಕ್ಕಿ ಮಹಿಳೆಯ ಕಾರ್ಯವನ್ನು ಶ್ಲಾಘಿಸಿದ್ದು, “ಸ್ವಚ್ಛ ಭಾರತದ ನಿಜವಾದ ನಾಯಕಿ ಇವರೇ. ಈ ಮಹಿಳೆಯನ್ನು ಸಂಪರ್ಕಿಸಿ ಮಾತನಾಡಿಸಲು ಅವಕಾಶ ಮಾಡಿಕೊಡಿ” ಎಂದು ಕೇಳಿಕೊಂಡಿದ್ದಾರೆ.