ದಾವಣಗೆರೆ ನಗರದಲ್ಲಿ 2023ರ ಡಿಸೆಂಬರ್ 23 ಮತ್ತು 24ರಂದು 24ನೇ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಅಧಿವೇಶನ ನಡೆಯಲಿದ್ದು, ಸಮಸ್ತ ವೀರಶೈವ ಲಿಂಗಾಯತ ಸಮಾಜವನ್ನು ಎಚ್ಚರಿಸಿ ಅಭಿವೃದ್ಧಿಯತ್ತ ಕರೆದೊಯ್ಯುವ ತಮ್ಮ ಪ್ರಯತ್ನಕ್ಕೆ ಅಭಿನಂದನೆಗಳು ಎಂದು ಲಿಂಗರಾಜ ವಿವಿಧೋದ್ದೇಶ ಸಂಸ್ಥೆಯ ಧಾರವಾಡದ ಅಧ್ಯಕ್ಷ ಆರ್ ಆರ್ ಕುಡವಕ್ಕಲಿಗೇರ ಹೇಳಿದರು.
ಧಾರವಾಡ ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, “1904ರಲ್ಲಿ ಹಾನಗಲ್ ಕುಮಾರಸ್ವಾಮಿಗಳವರ ಮಾರ್ಗದರ್ಶನದಲ್ಲಿ ತ್ಯಾಗವೀರ ಸಿರಸಂಗಿ ಲಿಂಗರಾಜರ ಮತ್ತು ಅರಟಾಳ ರುದ್ರಗೌಡರು ಮತ್ತು ಸಮಾಜದ ಅನೇಕ ಹಿರಿಯರ ನಿರಂತರ ಪ್ರಯತ್ನದಿಂದ ಮಹಾಸಭೆ ಸ್ಥಾಪಿತವಾಯಿತು. 1904ರ ಮೇ 13, 14 ಮತ್ತು 15 ರಂದು ಧಾರವಾಡದ ಟೌನ್ ಹಾಲ್‌ನಲ್ಲಿ ನಡೆದ ಪ್ರಥಮ ಅಧಿವೇಶನ ಹಾಗೂ 1905ರ ಜುಲೈ 13, 14 ಮತ್ತು 15 ರಂದು ಬೆಂಗಳೂರಿನಲ್ಲಿ ನಡೆದ ದ್ವಿತೀಯ ಅಧಿವೇಶನದ ಸರ್ವಾಧ್ಯಕ್ಷರಾಗಿ ಲಿಂಗರಾಜರು ಲಿಂಗಾಯತ ಸಮಾಜಕ್ಕೆ ನೀಡಿದ ಅಮೂಲ್ಯವಾದ ಸಂದೇಶಗಳು ಮತ್ತು ಲಿಂಗಾಯತ ಮಹಾಸಭಾದ ಅಭಿವೃದ್ಧಿಗಾಗಿ ಅವರು ನೀಡಿದ ಆರ್ಥಿಕ ನೆರವನ್ನು ಮಹಾಸಭಾ ಮರೆಯಬಾರದು” ಎಂದು ಹೇಳಿದರು.
“ಲಿಂಗಾಯತ ಮತ್ತು ವೀರಶೈವ ಮಠಮಾನ್ಯಗಳಿಗೆ, ಕೃಷಿಯ ಅಭಿವೃದ್ಧಿಗಾಗಿ ಅವರ ಕಾಣಿಕೆ ಅದ್ಭುತ. ಅಂತಿಮವಾಗಿ ಶೈಕ್ಷಣಿಕ ಅಭಿವೃದ್ಧಿಯಿಂದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಸಾಧ್ಯವೆಂದು ನಂಬಿ ತಮ್ಮ ಸಂಸ್ಥಾನದ ಸಾವಿರಾರು ಕೋಟಿ ರೂಪಾಯಿಗಳ ಆಸ್ತಿಯನ್ನು ತನ್ನವರಿಗಾಗಿ ಏನನ್ನೂ ನೀಡದೆ ಸಮಗ್ರ ಲಿಂಗಾಯತ ಸಮಾಜದ ಅಭಿವೃದ್ಧಿಗೆ ತ್ಯಾಗ ಮಾಡಿದ ಮಹಾದಾನಿ ಲಿಂಗರಾಜರು. ಅವರು ಲಿಂಗಾಯತ ಸಮಾಜಕ್ಕೆ ಪ್ರಾರ್ಥಸ್ಮರಣಿಯರು. ದೇಶದ ಪ್ರಪ್ರಥಮ ಮಹಾದಾನಿಗಳೆಂದರೆ ಲಿಂಗರಾಜರು ಇಂತಹ ಪ್ರಾರ್ಥಸ್ಮರಣೀಯರ ಹೆಸರನ್ನು “24ನೇ ಮಹಾಸಭೆಯ ಅಧಿವೇಶನದಲ್ಲಿ ಪ್ರಸ್ತಾಪಿಸದೆ ಇರುವುದು ಲಿಂಗರಾಜರ ಅಭಿಮಾನಿಗಳಿಗೆ ನೋವನ್ನುಂಟು ಮಾಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಕಟ್ಟಲು ಪ್ರಮುಖರಾದವರು ಸಾಕಷ್ಟು ಜನ ಇದ್ದರೂ ಕೂಡ ಸಿರಸಂಗಿ ಲಿಂಗರಾಜರು ಅಗ್ರಗಣ್ಯರು. ಇಂದಿಗೂ ಅವರ ದಾನದಿಂದ ರಚಿಸಲ್ಪಟ್ಟ ನವಲಗುಂದ-ಸಿರಸಂಗಿ ಟ್ರಸ್ಟ್ ಬೆಳಗಾಂವ ಇಂದಿಗೂ ಬೆಳಗಾಂವ ಜಿಲ್ಲಾಧಿಕಾರಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಲಿಂಗಾಯತ ಬಡ ಮಕ್ಕಳ ಶಿಕ್ಷಣಕ್ಕಾಗಿ ಶಿಷ್ಯವೇತನ ಕೊಡುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ಲಿಂಗಾಯತ ಬಡ ಮಕ್ಕಳು ಇದರ ಪ್ರಯೋಜನ ಪಡೆದಿರುತ್ತಾರೆ” ಎಂದರು.
“ತಮ್ಮ ಸಮಸ್ತ ಆಸ್ತಿಯನ್ನು ಲಿಂಗಾಯತ ಸಮಾಜಕ್ಕೆ ದಾನ ನೀಡಿದ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯನ್ನು ಅಸ್ತಿತ್ವಕ್ಕೆ ತರಲು ತಮ್ಮದೇ ಆದ ಕಾಣಿಕೆ ನೀಡಿದ ಮಹಾನ್ ಪುರುಷ ತ್ಯಾಗವೀರ ಸಿರಸಂಗಿ ಲಿಂಗರಾಜರ ಹೆಸರನ್ನು ದಾವಣಗೆರೆ ಅಧಿವೇಶನದಲ್ಲಿ ಎಲ್ಲಿಯೂ ಪ್ರಸ್ಥಾಪಿಸದೇ ಇರುವುದು ವಿಷಾಧನಿಯ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಸಂಸದರ ಅಮಾನತು ಪ್ರಜಾಪ್ರಭುತ್ವದ ಹತ್ಯೆ; ಎಸ್‌ಡಿಪಿಐ ಆಕ್ರೋಶ
“ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ತ್ಯಾಗವೀರ ಸಿರಸಂಗಿ ಲಿಂಗರಾಜರ ಹೆಸರನ್ನು ಜೊತೆಗೆ ಅವರ ಭಾವಚಿತ್ರವನ್ನು ಪ್ರಮುಖ ವೇದಿಕೆಯಲ್ಲಿ ಪ್ರಚುರ ಪಡಿಸಿ ಗೌರವ ಸೂಚಿಸಬೇಕಾಗಿ ವಿನಂತಿ, ಇದನ್ನು ಕಾರ್ಯರೂಪಕ್ಕೆ ತರದೇ ಇದ್ದಲ್ಲಿ ನಮ್ಮ ಹೋರಾಟ ಅನಿವಾರ್ಯ” ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಲಿಂಗರಾಜರ ಸಂಸ್ಥೆಯ ಕಾರ್ಯದರ್ಶಿಗಳು ವೈ ಎಫ್ ಹುಲಗೂರ, ಶೇಖರ ಹುಬ್ಬಳ್ಳಿ, ಎಮ್ ಸಿ ಹುಲ್ಲೂರ, ಆರ್ ಪಿ ಹುಲ್ಲೂರ, ಎಮ್ ಸಿ ಹುಗ್ಗಿ ಇದ್ದರು.