ಮತ್ತೆ ಮತ್ತೆ ಸಾಯುವ ದಾವೂದ್; ಈ ಬಾರಿ ಮಾಧ್ಯಮಗಳ ವರದಿ ಹೀಗಿತ್ತು..!

Date:

Advertisements

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಾವಿನ ಸುದ್ದಿಗಳು ’ತೋಳ ಬಂತು ತೋಳ ಕಥೆ’ಯಂತೆ ಆಗದಿರಲಿ ಅಲ್ಲವೇ?

ಮೋಸ್ಟ್‌ ವಾಂಟೆಡ್‌ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಾವಿನ ಸುದ್ದಿ ನಮ್ಮ  ಮಾಧ್ಯಮಗಳಲ್ಲಿ ಹಬ್ಬರಿಸುವುದು ಆಮೇಲೆ ತಣ್ಣಗಾಗುವುದು ಇದೇ ಮೊದಲೇನೂ ಅಲ್ಲ. ಈ ಕುರಿತು ತಮಾಷೆಯಾಗಿ ಹೇಳುವುದಾದರೆ, ಬಿಜೆಪಿ ಪ್ರೊಪಗಾಂಡ ಮಾಧ್ಯಮ ‘ಒಪಿ ಇಂಡಿಯಾ’ ಕೂಡ ದಾವೂದ್ ಸಾವಿನ ಕುರಿತು ಫ್ಯಾಕ್ಟ್‌ಚೆಕ್ ಮಾಡಿದೆ.

ರಾಷ್ಟ್ರೀಯ ಮಟ್ಟದ ದೃಶ್ಯ ಮಾಧ್ಯಮಗಳು ಈ ಬಾರಿ ಹೇಗೆ ವರ್ತಿಸಿದವು ಎಂಬುದನ್ನು ಪ್ರಖ್ಯಾತ ನ್ಯೂಸ್‌ ವೆಬ್‌ಸೈಟ್‌ ’ನ್ಯೂಸ್‌ಲಾಂಡ್ರಿ’ ಬಿಚ್ಚಿಟ್ಟಿದೆ.

Advertisements

“ಭೂಗತ ಪಾತಕಿ ದಾವೂದ್ ನಿಧನ ಎಂದು ಸೋಮವಾರ ಸುದ್ದಿ ಹಬ್ಬಿದ ತಕ್ಷಣ ಕೆಲವರು ಆತನಿಗೆ ವಿಷ ಇಂಜೆಕ್ಟ್ ಮಾಡಲಾಗಿದೆ. ಬಿಗಿಭದ್ರತೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಹಬ್ಬಿಸಿದರು.

ದಾವೂದ್ ಸಾವಿನ ಬಗ್ಗೆ ಸುದ್ದಿ ಹಬ್ಬುವುದನ್ನು ತಡೆಯುವುದಕ್ಕಾಗಿ ಪಾಕಿಸ್ತಾನದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ಕೆಲವರು ಅಭಿಪ್ರಾಯ ತಾಳಿದರು. ಅದೇ ದಿನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ವರ್ಚ್ಯುವಲ್‌ ರ್ಯಾಲಿಗೆ ಇಂಟರ್ನೆಟ್ ನಿರ್ಬಂಧ ಹೇರಲಾಗಿದೆ ಎಂಬ ಸುದ್ದಿಗಳು ಬಂದವು.

ಕರಾಚಿಯಲ್ಲಿ ವಿದ್ಯುತ್ ಕಡಿತ ಕೂಡ ಅನುಮಾನಕ್ಕೆ ಕಾರಣವಾಗಿದೆ ಎಂದು ಝೀ ನ್ಯೂಸ್ ವರದಿ ಮಾಡಿತು. ದಾವೂದ್‌ನ ಸುತ್ತಲಿನ ವರದಿಗಳು ಭಾರತೀಯ ಮಾಧ್ಯಮಗಳಲ್ಲಿ ಕ್ಲಿಕ್‌ಬೈಟ್‌ ಸ್ವರೂಪದಷ್ಟೇ ಆಗಿರುವುದಿಲ್ಲ. ನೆರೆಯ ರಾಷ್ಟ್ರದ ಬಗ್ಗೆ ಇವರಿಗಿರುವ ತಿಳಿವಳಿಕೆಯ ಕೊರತೆಯನ್ನೂ ಈ ವರದಿಗಳು ತೋರುತ್ತವೆ.

ಈ ಊಹಾಪೋಹದ ಸುದ್ದಿಯ ಮೂಲ ಯಾವುದು? ಖಚಿತ ಮಾಹಿತಿಯ ಮೂಲಗಳ ಪ್ರಕಾರ, ಪಾಕಿಸ್ತಾನದ ನಿಯೋಜಿತ ಪ್ರಧಾನಿ ಅನ್ವಾರ್ ಉಲ್ ಹಕ್ ಕಾಕರ್ ಹೆಸರನ್ನು ಹೋಲುವ ನಕಲಿ (ಪರೋಡಿ) ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. (ಚಿತ್ರದಲ್ಲಿ ಗಮನಿಸಿ ಅನ್ವಾರ್‌ ಅವರ ಒರಿಜಿನಲ್ ಹ್ಯಾಂಡಲ್‌ @anwaar_kakar ಆಗಿದ್ದರೆ, ನಕಲಿ ಹ್ಯಾಂಡಲ್‌ @anwaar_kakkar ಆಗಿದೆ.)

parodi

ನಕಲಿ ಟ್ವೀಟ್‌ನಲ್ಲಿ ಏನಿದೆ?

“ಮಾನವೀಯತೆಯ ಉದ್ಧಾರಕ, ಪ್ರತಿ ಪಾಕಿಸ್ತಾನಿ ಹೃದಯದ ಪ್ರಿಯ, ನಮ್ಮ ನೆಚ್ಚಿನ ದಾವೂದ್ ಇಬ್ರಾಹಿಂ, ಅಪರಿಚಿತರಿಂದಾಗಿ ವಿಷ ಸೇವಿಸಿ ನಿಧನರಾದರು. ಅವರು ಕರಾಚಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅಲ್ಲಾಹನು ಅವರಿಗೆ ಜನ್ನತ್‌ನಲ್ಲಿ ಅತ್ಯುನ್ನತ ಸ್ಥಾನವನ್ನು ನೀಡಲಿ” ಎಂದಿದೆ ನಕಲಿ ಟ್ವೀಟ್.

ಈ ಟ್ವೀಟ್ ಅನ್ನು ಮೂಲವನ್ನಾಗಿ ಪರಿಗಣಿಸಿ ವರದಿಯನ್ನು ಪ್ರಕಟಿಸಿದ್ದು ’ರಾಜಸ್ಥಾನ ಪತ್ರಿಕಾ’ ವೆಬ್‌ಸೈಟ್. ಅದು ಭಾರತದಲ್ಲಿ ಹೆಚ್ಚು ಜನ ಓದುವ ಪಬ್ಲಿಕೇಷನ್‌ಗಳಲ್ಲಿ ಒಂದಾಗಿದೆ. ದಾವೂದ್ ವಿಷ ಸೇವಿಸಿ ಆಸ್ಪತ್ರೆಯಲ್ಲಿದ್ದರು ಎಂದು ಅದರ ವರದಿ ಹೇಳಿದೆ.

rajasthan patrika

ಆದರೆ ಪಾಕಿಸ್ತಾನದ ಬಗ್ಗೆ ಸ್ವಲ್ಪ ತಿಳಿವಳಿಕೆ ಇರುವ ಯಾವುದೇ ಪತ್ರಕರ್ತರು ಟ್ವೀಟ್‌ನಲ್ಲಿರುವ ಭಾಷೆಯನ್ನು ಸೂಕ್ಷ್ಮವಾಗಿ ಗಮನಿಸದೆ ಇರುವುದಿಲ್ಲ. ಪಾಲಾಯನ ಮಾಡಿದವರ ಅಥವಾ ಭೂಗತರಾದವರ ಕುರಿತಾದ ಯಾವುದೇ ಸುದ್ದಿಯಿಂದ ಪದೇ ಪದೇ ದೂರವಿದ್ದ ಪಾಕಿಸ್ತಾನಿ ಉನ್ನತ ಅಧಿಕಾರಿಗಳು ಆತನ ಸಾವಿಗೆ ಸಂತಾಪವನ್ನು ಹೀಗೆ ಸೂಚಿಸುವುದುಂಟೆ? ಮಾನವೀಯತೆಗೆ ಬಹುದೊಡ್ಡ ಕೊಡುಗೆ ಕೊಟ್ಟವನೆಂದು ಆತನನ್ನು ಹೊಗಳುವುದುಂಟೆ?

ರಾಜಸ್ಥಾನ ಪತ್ರಿಕಾವು ತನ್ನ ವರದಿಯನ್ನು ಗಟ್ಟಿಗೊಳಿಸುವಂತೆ ಮತ್ತೊಂದು ಸಂಗತಿಯನ್ನು ಪೋಣಿಸಿತ್ತು. ದಾವೂದ್‌ನ ಸಂಬಂಧಿ ಮತ್ತು ಪಾಕಿಸ್ತಾನಿ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್‌ ಅವರ ‘ಗೃಹಬಂಧನ’ವಾಗಿದೆ ಎಂಬುದು ಆ ವರದಿಯಾಗಿತ್ತು. ಆದರೆ ತನ್ನ ಗೃಹಬಂಧನದ ಸುದ್ದಿ ಸುಳ್ಳು ಎಂದು ಜಾವೇದ್ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಎರಡನೇ ಪ್ರಮುಖ ಮೂಲವೆಂದರೆ ಪಾಕಿಸ್ತಾನಿ ವಿಶ್ಲೇಷಕಿ ’ಅರ್ಜೂ ಕಾಜ್ಮಿಯಾ’ ಯೂಟ್ಯೂಬ್ ವೀಡಿಯೋ. ಬಲಪಂಥೀಯ ಪ್ರೊಪೊಗಾಂಡ ಯೂಟ್ಯೂಬ್ ಚಾನೆಲ್‌ ಆಗಿರುವ ‘ಜೈಪುರ ಡೈಲಾಗ್ಸ್‌’ನಲ್ಲಿ ಆಗಾಗ್ಗೆ ಕಾಣಿಸಿಕೊಂಡಿದ್ದರಿಂದ ಭಾರತದಲ್ಲಿ ಕಾಜ್ಮಿಯಾ ಅವರಿಗೆ ಹೆಚ್ಚಿನ ಮಾನ್ಯತೆ ಸಿಕ್ಕಂತೆ ತೋರುತ್ತಿದೆ.

Rajasthan Kazmi

ಕಾಜ್ಮಿ ತಮ್ಮ ವಿಡಿಯೊದಲ್ಲಿ, “ದಾವೂದ್ ವಿಷ ಸೇವಿಸಿದ್ದಾನೆ ಎಂಬ ಮಾಹಿತಿಗಳು ನನಗೆ ಬಂದಿವೆ. ಈ ವರದಿಗಳಿಂದಾಗಿ ಅಂತರ್ಜಾಲದ ಮೇಲಿನ ನಿರ್ಬಂಧ ಹೇರುವ ಸಾಧ್ಯತೆ ಇದೆ” ಎಂದಿದ್ದಾರೆ. ಮುಂದುವರಿದು, “ಇದು ಹಾಗೆ ಆಗಿಲ್ಲದೆಯೂ ಇರಬಹುದು. ಆದರೆ ಈ ರೀತಿ ಕಾಣುತ್ತದೆ” ಎಂದೂ ತಿಳಿಸಿದ್ದಾರೆ.

kazmi

ಕಾಜ್ಮಿ ವಿಡಿಯೊದಲ್ಲಿ ಸ್ಪಷ್ಟತೆ ಇರದಿದ್ದರೂ ಅವರ ಮಾತನ್ನೇ ಅಧಿಕೃತವೆಂದು ಭಾವಿಸಿದವರಲ್ಲಿ ಇಂಡಿಯಾ ಟುಡೆಯೂ ಸೇರಿಕೊಂಡಿತು.

ಮೂರನೆಯ ಮೂಲ: ಇಂಡಿಯಾ ಟುಡೇ ಮತ್ತು ಎಬಿಪಿ ನ್ಯೂಸ್‌ನಂತಹ ಹಲವಾರು ಸಂಸ್ಥೆಗಳು ಉಲ್ಲೇಖಿಸಿದ ಅನಾಮಧೇಯ ಮೂಲಗಳು.

ಎಬಿಪಿ ನ್ಯೂಸ್‌, Is Dawood Ibrahim Dead? India’s Most Wanted Terrorist May Have Died After Poisoning Bid In Karachi: Sources” (“ದಾವೂದ್ ಇಬ್ರಾಹಿಂ ಸತ್ತನೇ? ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಕರಾಚಿಯಲ್ಲಿ ವಿಷ ಸೇವಿಸಿದ ನಂತರ ಸಾವು: ಮೂಲಗಳ ವರದಿ” ಎಂದು ಶೀರ್ಷಿಕೆ ನೀಡಿತು.

ಆದರೆ, ಒಂದಿಷ್ಟು ಪತ್ರಿಕಾ ಮೌಲ್ಯವನ್ನು ಆರಂಭ ವಾಕ್ಯದಲ್ಲೇ ಪ್ರದರ್ಶಿಸಿದ ಎಬಿಪಿ, “ಇದುವರೆಗೆ ಯಾವುದೇ ಅಧಿಕೃತ ಮೂಲಗಳು ದೃಢೀಕರಿಸಿಲ್ಲ” ಎಂಬ ವಾಕ್ಯವನ್ನೂ ಸೇರಿಸಿದೆ.

ಕೆಲವೇ ಗಂಟೆಗಳಲ್ಲಿ ಸಾವಿನ ಸುತ್ತಲಿನ ಸುದ್ದಿ ದಾವೂದ್ ಆಸ್ಪತ್ರೆಗೆ ಸೇರಿದ್ದಾನೆ ಎಂಬ ಊಹಾಪೋಹಗಳನ್ನು ಒಳಗೊಂಡಿತು.

ಟೈಮ್ಸ್ ನೌ ಎರಡು ರೀತಿಯ ಥಿಯರಿಗಳನ್ನು ಬಿತ್ತಿತು. ವಯೋ ಸಹಜ ಕಾಯಿಲೆಯಿಂದ ದಾವೂದ್  ಆಸ್ಪತ್ರೆಗೆ ದಾಖಲಾಗಿದ್ದಾನೆ ಅಥವಾ ವಿಷ ಪ್ರಷಾನವಾಗಿದೆ ಎಂಬ ಅಭಿಪ್ರಾಯಕ್ಕೆ ಬಂದಿತು. ಒಬ್ಬ ವರದಿಗಾರ ಪರಾರಿಯಾದವರ ಸಂಬಂಧಿಕರು ಈ ಹಿಂದೆ ಪೊಲೀಸರಿಗೆ ಏನು ಹೇಳಿದರು ಎಂಬುದರ ಕುರಿತು ಅಪ್‌ಡೇಟ್‌ ನೀಡಿದನು.  ಶ್ರೀನಗರದ ಮತ್ತೊಬ್ಬ ವರದಿಗಾರ ಮೂಲಗಳನ್ನು ಉಲ್ಲೇಖಿಸಿ ದಾವೂದ್‌ಗೆ ಪಾಕಿಸ್ತಾನ ಸರ್ಕಾರ ರಕ್ಷಣೆ ನೀಡಿದೆ ಎಂದನು.

ಇದರ ನಡುವೆ ದಾವೂದ್ ಸಂಬಂಧಿಕರೊಬ್ಬರು ರಿಪಬ್ಲಿಕ್ ಟಿವಿಯೊಂದಿಗೆ ಮಾತನಾಡುತ್ತಾ, ದಾವೂದ್‌ ವಿಷ ಸೇವಿಸಿದ್ದಾನೆ ಎಂಬ ಹೇಳಿಕೆಯನ್ನು ನಿರಾಕರಿಸಿದ್ದೂ ನಡೆಯಿತು.

ಆದರೆ ಜೀ ನ್ಯೂಸ್ ಕರಾಚಿಯಲ್ಲಿ “ಹಠಾತ್ ವಿದ್ಯುತ್ ಕಡಿತವಾಗಿದೆ” ಎಂದಿತು. ದಾವೂದ್ ಸಾವಿನ ಬಗ್ಗೆ “ಸುದ್ದಿ” ಹೊರಹೊಮ್ಮಿದ ಅದೇ ಸಮಯದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿರುವ ಕುರಿತೂ ವರದಿ ಮಾಡಿತು.

ಝೀ ನ್ಯೂಸ್‌ನಂತೆ, ದೈನಿಕ್ ಜಾಗರಣ್‌ನಂತಹ ಭಾರತೀಯ ಪೋರ್ಟಲ್‌ಗಳಲ್ಲಿನ ಸುದ್ದಿಯು ಕೂಡ ದಾವೂದ್‌ನ ಸಾವಿನ ಸುತ್ತ ಇಂಟರ್ನೆಟ್ ಸ್ಥಗಿತವನ್ನು ತಳುಕು ಹಾಕಿತು.

ಮತ್ತೊಂದೆಡೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆನ್‌ಲೈನ್ ರ್‍ಯಾಲಿ ಆಯೋಜನೆ ಆಗಿರುವ ಬೆಳವಣಿಗೆಗಳ ಮಧ್ಯೆ ಪಾಕಿಸ್ತಾನದಾದ್ಯಂತ ನಗರ ಪ್ರದೇಶಗಳಲ್ಲಿ ವೆಬ್ ಮತ್ತು ಸಾಮಾಜಿಕ ಮಾಧ್ಯಮಗಳ ಸೇವೆಗೆ ಅಡ್ಡಿಯಾಗಿರುವ ಸಂಬಂಧ ಡಾನ್‌ನಂತಹ ಪ್ರಮುಖ ಪಾಕಿಸ್ತಾನಿ ಪೋರ್ಟಲ್‌ ವರದಿ ಮಾಡಿದೆ.

dawn

“ಎಕ್ಸ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಿಗೆ ಪಾಕಿಸ್ತಾನದಾದ್ಯಂತ ಅಡ್ಡಿಯಾಗಿದೆ” ಎಂದು ಇಂಟರ್ನೆಟ್ ವಾಚ್‌ಡಾಗ್ ನೆಟ್‌ಬ್ಲಾಕ್ಸ್ ವರದಿ ತಿಳಿಸಿದೆ.

ಅಂದಹಾಗೆ ದಾವೂದ್ ಸಾವಿನ ಸುದ್ದಿ ಇದೇ ಹೊಸದಾಗಿ ಬರುತ್ತಿಲ್ಲ.

2016 ರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹದ್ದೇ ಸುದ್ದಿ ಹಬ್ಬಿತ್ತು. ದಾವೂದ್ ಕಾಲುಗಳಿಗೆ ಗ್ಯಾಂಗ್ರೀನ್ ಆಗಿದೆ. ಆತನ ಕಾಲುಗಳನ್ನೇ ಕತ್ತರಿಸಬೇಕಾಗುತ್ತೆ ಎಂಬ ವದಂತಿ ಹರಡಲಾಗಿತ್ತು. CNN-News18 ಸೇರಿದಂತೆ ಹಲವಾರು ಮಾಧ್ಯಮಗಳು ವರದಿ ಮಾಡುತ್ತಾ, “ಆತನನ್ನು ಇಲ್ಲಿಗೆ ಹಸ್ತಾಂತರಿಸಬೇಕೆಂಬ ಭಾರತದ ಪ್ರಯತ್ನಗಳ ಮೇಲೆ ಈ ಕಾರಣದಿಂದ ಪರಿಣಾಮ ಬೀರಬಹುದು” ಎಂದಿದ್ದವು.

ದಾವೂದ್‌ಗೆ ಹೃದಯಾಘಾತವಾಗಿದೆ ಎಂಬ ಊಹಾಪೋಹಗಳು 2017ರಲ್ಲಿ ಹಬ್ಬಿದ್ದವು. ಅನಾಮಧೇಯ ಮೂಲಗಳನ್ನು ಅವಲಂಬಿಸಿ, ಮುಖ್ಯವಾಹಿನಿಯ ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದವು.

ಸಿಎನ್‌ಎನ್ ನ್ಯೂಸ್ 18, ಪಾಕಿಸ್ತಾನದಿಂದ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ. ಏಕೆಂದರೆ ಅಂತಹ ಪ್ರಕಟಣೆ ಬಂದರೆ ಪಾಕಿಸ್ತಾನಕ್ಕೆ ಕಠಿಣ ಪರಿಸ್ಥಿತಿ ಎದುರಾಗುತ್ತದೆ ಎಂದು ಟ್ವೀಟ್ ಮಾಡಿತ್ತು! “ದಾವೂದ್ ಕಿ ಅಂತಿಮ್ ಸಾನ್ಸ್ ಪರ್ ಎಬಿಪಿ ಕಿ ನಜರ್” ಎಂಬ ಕಾರ್ಯಕ್ರಮವನ್ನು ಮಾಡುವ ಮೂಲಕ ದಾವೂದ್‌ನ ಕೊನೆಯ ಉಸಿರಿಗಾಗಿ ಎಬಿಪಿ ಕ್ಷಣಗಣನೆ ಆರಂಭಿಸಿತ್ತು!

ಅಂತಿಮವಾಗಿ ಕೆಲವು ಮಾಧ್ಯಮಗಳು ಫ್ಯಾಕ್ಟ್‌ಚೆಕ್ ಮಾಡುವ ಪ್ರಯತ್ನವನ್ನು ಮಾಡಿ, ಈಗ ಹಬ್ಬಿರುವುದು ವದಂತಿ ಎದ್ದಿದ್ದವು.

ದಾವೂದ್ ಮತ್ತು ಆತನ ಪತ್ನಿ ಕೋವಿಡ್ ಸೋಂಕಿಗೆ ಬಲಿಯಾದರು ಎಂಬ ಸುದ್ದಿ 2020ರಲ್ಲಿ ಬಂದಿತ್ತು. ಆದರೆ ಇದು ಕೂಡ ಊಹಾಪೋಹವೇ ಆಗಿತ್ತು. ದಾವೂದ್‌ನ ಕೆಲವೇ ಕೆಲವು ವಿಡಿಯೊಗಳು, ಕೆಲವೇ ಕೆಲವು ಫೋಟೋಗಳು ಸಾರ್ವಜನಿಕವಾಗಿ ಲಭ್ಯವಿವೆ. ಆತನ ಕುರಿತ ವದಂತಿಗಳು ಹಬ್ಬಿದಾಗ ಮಾಧ್ಯಮಗಳು ಅವುಗಳನ್ನು ತಿರುಗಾಮುರುಗಾ ಪ್ರಕಟಿಸುತ್ತವೆ.

1993ರ ಮುಂಬೈ ಸ್ಫೋಟದ ಸಂಚುಕೋರ ದಾವೂದ್‌ನ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಪಾಕಿಸ್ತಾನ ಪದೇ ಪದೇ ಹೇಳುತ್ತಿದೆ. ಆದರೆ ಇತರ ಭಯೋತ್ಪಾದಕರಂತೆ ದಾವೂದ್‌ಗೂ ಪಾಕಿಸ್ತಾನ ಆಶ್ರಯ ನೀಡಿದೆ ಎಂದು ಭಾರತ ಮತ್ತೆ ಮತ್ತೆ ಪ್ರತಿಪಾದಿಸಿದೆ.

ಭೂಗತ ಲೋಕದ ಡಾನ್ ದಾವೂದ್ ಇತರ ದಾಳಿಗಳ ಮಾಸ್ಟರ್ ಮೈಂಡ್ ಎಂಬ ಕುರಿತು ಪ್ರಕರಣ ದಾಖಲಾಗಿವೆ. ಮನಿ ಲಾಂಡರಿಂಗ್ ಮತ್ತು ಸುಲಿಗೆಯ ಆರೋಪಗಳು ಆತನ ಮೇಲಿವೆ. ಅಲ್ ಖೈದಾ ಮತ್ತು ಲಷ್ಕರ್-ಎ-ತೊಯ್ಬಾ ಸೇರಿದಂತೆ ಭಯೋತ್ಪಾದಕ ಗುಂಪುಗಳಿಗೆ ದಾವೂದ್ ಹಣಕಾಸು ನೆರವು ನೀಡುತ್ತಿದ್ದಾನೆ ಎಂದು ಭಾರತ ಹಾಗೂ ಅಮೆರಿಕ ದೂರಿವೆ.

ಜಾಗತಿಕ ಹಣಕಾಸು ವಾಚ್‌ಡಾಕ್ ಎಂದೇ ಪರಿಗಣಿತವಾದ ಎಫ್‌ಎಟಿಎಫ್‌ ಒತ್ತಡದ ನಡುವೆ ಪಾಕಿಸ್ತಾನವು, 26/11 ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್, ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಮತ್ತು ದಾವೂದ್ ಇಬ್ರಾಹಿಂನಂತಹ ಭಯೋತ್ಪಾದಕ ಸಂಘಟನೆಗಳ ಪ್ರಮುಖ ವ್ಯಕ್ತಿಗಳ ಮೇಲೆ ನಿರ್ಬಂಧಗಳನ್ನು ಘೋಷಿಸುವ ಎರಡು ಅಧಿಸೂಚನೆಗಳನ್ನು 2020 ರಲ್ಲಿ ಪ್ರಕಟಿಸಿತ್ತು. ಕರಾಚಿಯಲ್ಲಿನ “ವೈಟ್ ಹೌಸ್, ಸೌದಿ ಮಸೀದಿ ಹತ್ತಿರ, ಕ್ಲಿಫ್ಟನ್” ದಾವೂದ್‌ನ ಮನೆಯ ವಿಳಾಸವಾಗಿದೆ ಎಂದು ತಿಳಿಸಲಾಗಿದೆ. ಕರಾಚಿಯಲ್ಲಿನ ಇತರ ಸ್ಥಳಗಳನ್ನು ದಾವೂದ್‌ಗೆ ಸಂಬಂಧಪಟ್ಟಿವೆ ಎಂದು ಪಟ್ಟಿ ಮಾಡಲಾಗಿದೆ. ಆದರೆ ದಾವೂದ್‌ನ ತಾಜಾ ಫೋಟೋ, ವಿಡಿಯೊಗಳೇನೂ ಸಾರ್ವಜನಿಕವಾಗಿ ಲಭ್ಯವಿಲ್ಲ. ಆತನ ಸಾವಿನ ಸುದ್ದಿಯು ’ತೋಳ ಬಂತು ತೋಳ ಕಥೆ’ಯಂತೆ ಆಗದಿರಲಿ ಅಲ್ಲವೇ?

(ಮಾಹಿತಿ ಕೃಪೆ: ನ್ಯೂಸ್ ಲಾಂಡ್ರಿ)

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

Download Eedina App Android / iOS

X