ಶಾಲೆಯ ಸಮೀಪದ ಪಾಳು ಭೂಮಿಯು ಬಯಲು ಬಹಿರ್ದೆಸೆ ಮತ್ತು ಕೊಳಚೆಯ ತಾಣವಾಗಿದೆ. ಪರಿಣಾಮ, ಶಾಲೆಯ ವಿದ್ಯಾರ್ಥಿಗಳು ದುರ್ವಾಸನೆಯ ನಡುವೆಯೇ ಪಾಠ ಕೇಳುವ ಪರಿಸ್ಥಿತಿ ಹಳ್ಳೂರು ಸರ್ಕಾರಿ ಶಾಲೆಯಲ್ಲಿದೆ.
ಉತ್ತರ ಕನ್ನಡ ಜಿಲ್ಲೆಯ ಮಂಡಗೋಡ ತಾಲೂಕಿನ ಹಳ್ಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕಳೆದ ಮೂರು ವರ್ಷಗಳಿಂದ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ದುರ್ವಾಸನೆಯ ತಡೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.
“ದುರ್ವಾಸನೆಯಿಂದಾಗಿನಮಗೆ ಸರಿಯಾಗಿ ಉಸಿರಾಡಲು ಸಹ ಸಾಧ್ಯವಾಗಲಿಲ್ಲ. ಸರಿಯಾದ ಚರಂಡಿ ನಿರ್ಮಾಣ ಮಾಡಿ ಕೊಳಚೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ಆದರೆ, ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ತರಗತಿಯಲ್ಲಿ ಕೂರಲಾಗದೆ, ಹೊರಗಡೆ ಪಾಠ ಮಾಡುವಂತೆ ನಾವು ಶಿಕ್ಷಕರಿಗೆ ಮನವಿ ಮಾಡಿದ್ದೇವೆ” ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
“ಶಾಲೆಯಲ್ಲಿ ನಾಲ್ವರು ಶಿಕ್ಷಕರು ಹಾಗೂ ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಶಾಲೆಯ ಹಿಂದೆ ಒಬ್ಬರು ಮನೆ ನಿರ್ಮಾಣ ಮಾಡಿದ್ದಾರೆ. ಅವರ ಮನೆಯ ಶೌಚಾಲಯ ಮತ್ತು ತ್ಯಾಜ್ಯದ ನೀರು ಶಾಲೆಯ ಕಡೆಗೆ ಹರಿಯುತ್ತದೆ. ಆ ಬಗ್ಗೆ ಹಲವು ಬಾರಿ ಅವರಿಗೆ ತಿಳಿಸಿದ್ದೇವೆ. ಆದರೆ, ಏನೂ ಉಪಯೋಗವಾಗಿಲ್ಲ. ಸಮಸ್ಯೆ ಬಗ್ಗೆ ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಅವರು ಕೂಡ ಏನೂ ಮಾಡಿಲ್ಲ. ನಮಗೆ ಸಾಕಾಗಿಹೋಗಿದೆ” ಎಂದು ಶಾಲೆಯ ಮುಖ್ಯಶಿಕ್ಷಕ ನಾಗರಾಜ್ ಕ್ಯಾಲಕೊಂಡ್ ಹೇಳಿದ್ದಾರೆ.
“ದುರ್ವಾಸನೆಯಿಂದಾಗಿ ಅನೇಕ ವಿದ್ಯಾರ್ಥಿಗಳು ಶಾಲೆ ತೊರೆದಿದ್ದಾರೆ. ಈ ಹಿಂದೆ 200 ವಿದ್ಯಾರ್ಥಿಗಳು ಇದ್ದರು. ಈಗ ವಿದ್ಯಾರ್ಥಿಗಳ ಸಂಖ್ಯೆ 120ಕ್ಕೆ ಕುಸಿದಿದೆ” ಎಂದು ಅವರು ತಿಳಿಸಿದ್ದಾರೆ.
“ಶಾಲೆಯ ಹಿಂಭಾಗದಲ್ಲಿರುವ ಖಾಸಗಿ ಮನೆಗೆ ಚರಂಡಿ ಇಲ್ಲ. ಹೆಚ್ಚೆಂದರೆ, ನಾನು ಒಳಚರಂಡಿಯನ್ನು ನಿರ್ಮಾಣ ಮಾಡಬಹುದು. ನಾವು ಅದನ್ನು ಶೀಘ್ರದಲ್ಲೇ ಮಾಡುತ್ತೇವೆ” ಎಂದು ಮುಖ್ಯಾಧಿಕಾರಿ ಚಂದ್ರಶೇಖರ ಬಿ ಹೇಳಿದ್ದಾರೆ.