ರಾಯಚೂರು ಜಿಲ್ಲೆ ಪಟ್ಟಣಕ್ಕೆ ಕುಡಿಯಲು ನೀರು, ಜತ್ತಿ ಕಾಲೋನಿ ರಸ್ತೆ ದುರಸ್ಥಿ, ಪದವಿ, ಐಟಿಐ, ಡಿಪ್ಲೊಮೊ ಕಾಲೇಜು ಮಂಜೂರು, ಕಾಮ್ರೇಡ್ ಅಮರಗುಂಡಪ್ಪ ಬಸ್ ನಿಲ್ದಾಣದ ಜಾಗ ಒತ್ತುವರಿ ತೆರವು, ಸರಿಯಾದ ಕಸ ವಿಲೇವಾರಿ, ಪಟ್ಟಣಕ್ಕೆ ರುದ್ರಭೂಮಿ, ಗ್ರಂಥಾಲಯ, ಪಾರ್ಕ್ ಮಂಜೂರು ಮಾಡಲು ಆಗ್ರಹಿಸಿವೆ.
ಅಲ್ಲದೇ, ಪಟ್ಟಣದಲ್ಲಿ ಎಗ್ಗಿಲ್ಲದೇ ನಿರ್ಭಯವಾಗಿ ನಡೆಯುತ್ತಿರುವ ಮಟಕಾ, ಇಸ್ಪೀಟ್, ಗಾಂಜಾ ದಂಧೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಎಸ್ಎಫ್ಐ, ಡಿವೈಎಫ್ಐ, ಸಿಐಟಿಯು, ಕೆಪಿಆರ್ ಎಸ್, ಆಟೋ ರಿಕ್ಷಾ ಚಾಲಕರ ಸಂಘಟನೆಗಳು ಜಂಟಿಯಾಗಿ ಪಟ್ಟಣದ ಅಮರಗುಂಡಪ್ಪ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿವೆ.
ನಗರದಲ್ಲಿ ನಡೆಯುತ್ತಿರುವ ಬ್ರಿಡ್ಜ್ ಕಾಮಗಾರಿ ಎಸ್ಟಿಮೇಟ್‌ನಲ್ಲಿ ಈ ರಸ್ತೆಯನ್ನು ನಿರ್ಮಾಣ ಮಾಡಬೇಕೆಂದು ಇದ್ದರೂ ಸಹ ರಸ್ತೆ ನಿರ್ಮಾಣವಾಗಿಲ್ಲ. ಈ ಕೂಡಲೇ ರಸ್ತೆಯನ್ನು ಸಹ ಮಾಡಿ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಹಟ್ಟಿ ಪಟ್ಟಣ ಮತ್ತು ರಸ್ತೆಗಳು ಕೋಳಿ ಪುಕ್ಕ, ಪ್ಲಾಸ್ಟಿಕ್, ಇತರೆ ವಸ್ತುಗಳಿಂದ ಮಲೀನವಾಗಿದ್ದು, ಕೂಡಲೇ ಈ ಕಸ ವಿಲೇವಾರಿ ಘಟಕ ನಿರ್ಮಿಸಿ ಸರಿಯಾದ ಸಮಯಕ್ಕೇ ಕಸ ವಿಲೇವಾರಿ ಮಾಡಬೇಕು ಎಂದು ಆಗ್ರಿಸಿದ್ದಾರೆ.
ಪಟ್ಟಣದ ಕಾಮ್ರೇಡ್ ಅಮರಗುಂಡಪ್ಪ ಬಸ್ ನಿಲ್ದಾಣ (ವಿಲೇಜ್ ಬಸ್ ಸ್ಟ್ಯಾಂಡ್) ಜಾಗ ಒತ್ತುವರಿಯಾಗಿ ಬಸ್‌ಗಳು ನಿಲ್ಲಿಸಲು ಮತ್ತು ಸಾರ್ವಜನಿಕರು ನಿಲ್ಲಲು ಜಾಗವಿಲ್ಲದಂತಾಗಿದೆ. ಈಗಾಗಲೇ ಕೋರ್ಟ್ ಒತ್ತುವರಿ ಜಾಗ ತೆರವುಗೊಳಿಸಲು ಆದೇಶ ನೀಡಿ ದಶಕಗಳು ಕಳೆದರೂ ತೆರವುಗೊಳಿಸಿಲ್ಲ. ಈ ಕೂಡಲೇ ಒತ್ತುವರಿಯಾದ ಜಾಗವನ್ನು ತೆರವುಗೊಳಿಸಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಹಟ್ಟಿಯಲ್ಲಿ ಸತ್ತ ಹೆಣಗಳನ್ನು ಹೂಳಲು ರುದ್ರ ಭೂಮಿ ಇಲ್ಲದಂತಾಗಿದೆ. ಕೂಡಲೇ ರುದ್ರಭೂಮಿ ಮಂಜೂರು ಮಾಡಬೇಕು. ಹಟ್ಟಿ ಪಟ್ಟಣಕ್ಕೆ ಪದವಿ ಕಾಲೇಜು ಮಂಜೂರು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಹಟ್ಟಿ ಪಟ್ಟಣದಲ್ಲಿ ಮಟಕಾ, ಗಾಂಜಾ, ಇಸ್ಪೀಟ್, ಕ್ರಿಕೆಟ್ ಬೆಟ್ಟಿಂಗ್ ದಂಧೆ ಹೆಚ್ಚಾಗಿದ್ದು, ಹಾದಿ ಬೀದಿಯಲ್ಲಿ ಮಟಕಾ ದಂಧೆ ನಿರ್ಭಯವಾಗಿ ನಡೆಯುತ್ತಿದ್ದರೂ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ. ಮತ್ತುಸಂಪೂರ್ಣವಾಗಿ ವಿದ್ಯಾರ್ಥಿ ಯುವಜನ ರೈತರು ಕಾರ್ಮಿಕರು ಸಂಪೂರ್ಣವಾಗಿ ಇದಕ್ಕೆ ಬಲಿಯಾಗಿ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ.
ಹಟ್ಟಿ ಪಟ್ಟಣದಲ್ಲಿ ಎಲ್ಲ ಸಿಎ ಸೈಟುಗಳನ್ನು ಒತ್ತುವರಿ ಮಾಡಿದ್ದು, ಕೂಡಲೇ ಅವುಗಳನ್ನು ತೆರವುಗೊಳಿಸಿ ನಾಗರಿಕ ಸೌಲಭ್ಯಕ್ಕೆ ಅನುಕೂಲವಾಗುವ ಗ್ರಂಥಾಲಯ, ಪಾರ್ಕ್, ಭವನಗಳನ್ನು ನಿರ್ಮಿಸಬೇಕು ಹಾಗೂ ಹಟ್ಟಿಯ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಬೇಕು ಎಂದು ಜಂಟಿ ಸಂಘಟನೆಗಳು ಒತ್ತಾಯಿಸುತ್ತೇವೆ. ನಿರ್ಲಕ್ಷ್ಯ ತೋರಿದರೆ ಹಟ್ಟಿ ಪಟ್ಟಣದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ನಡೆಸಲಾಗುವುದೆಂದು ಈ ವೇಳೆ ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಎಸ್‌ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರ, ನರಸಿಂಹ ಬಾನು ಠಾಕೂರ್, ಅಮರೇಶ ಗುರಿಕಾರ್, ನಿಂಗಪ್ಪ ಎಂ, ಬಸವಲಿಂಗ, ಶೇಖರಪ್ಪ ಯದ್ದಲದೊಡ್ಡಿ, ಫಕ್ರುದ್ದೀನ್, ಮಹ್ಮದ್ ಹನೀಫ್ ಸಂಗಪ್ಪ ಸಗರದ್, ಅಲ್ಲಾಭಕ್ಷ ಪವನ್ ಕಮದಾಳ್, ಮಲ್ಲಿಕಾರ್ಜುನ್ ದೊರೆ, ದಾವೂದ್, ರಂಗನಾಥ್ ದೊರೆ, ಶಿವಣ್ಣ ಮ್ಯಾಗೇರಿ, ಕಾಶಿಪತಿ, ಬೆಟ್ಟಪ್ಪ, ಶೌಕತ್ ಅಲಿ, ಬಸವಲಿಂಗ, ಮಹಿಬೂಬ್ ಖುರೇಷಿ, ಸಲೀಂ ಪಾಷಾ, ಚೆನ್ನಬಸವ ಅಂಬೇಡ್ಕರ್ ನಗರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.