ಪ್ರತಿ ವರ್ಷವೂ ಮತದಾರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತದೆ. ಅಧಿಕಾರಿಗಳು ಈ ಕೆಲಸವನ್ನು ಸರಿಯಾಗಿ ಮಾಡಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವ ಸಲುವಾಗಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಗುರುವಾರ ಮನೆ-ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಶೀಲನೆ ನಡೆಸಿದರು.
ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಅಕ್ಟೋಬರ್ 27 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಸದರಿ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದಲ್ಲಿ, ತಪ್ಪಾಗಿದ್ದಲ್ಲಿ, ತಪ್ಪಾಗಿ ಸೇರ್ಪಡೆಗೊಂಡಿದ್ದಲ್ಲಿ ಹಾಗೂ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ನಮೂನೆ-6, 7 ಮತ್ತು 8 ರಲ್ಲಿ ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅ.27 ರಿಂದ ಡಿ.9 ರವರೆಗೆ ಅವಕಾಶ ಕಲ್ಪಿಸಲಾಗಿತ್ತು.
ಈ ವೇಳೆ ಎಲ್ಲ ಬಿ.ಎಲ್.ಓ ಮತ್ತು ಬಿ.ಎಲ್.ಓ ಮೇಲ್ವಿಚಾರಕರುಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಿಸುವ ಕಾರ್ಯ ಮಾಡಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಮಾಡಿರುವುದನ್ನು ಜಿಲ್ಲಾ ಚುನಾವಣಾ ಅಧಿಕಾರಿ, ಅಪರ ಜಿಲ್ಲಾ ಚುನಾವಣಾ ಅಧಿಕಾರಿಗಳು ಕೆಲ ಮನೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿರುವ ಬಗ್ಗೆ ಸೂಪರ್ ಚೆಕ್ಕಿಂಗ್ ಮಾಡಲಾಗುತ್ತದೆ. ಅದರಂತೆ ಇಂದು ಕೆಲ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಮೂನೆಗಳ ಪರಿಶೀಲನೆ
ಶಾಂತಿನಗರದ ಹಾಗೂ ಶಿವಾಜಿನಗರರದ ವಿಧಾನಸಭಾ ಕ್ಷೇತ್ರದಲ್ಲಿ ನಮೂನೆ-6, ನಮೂನೆ-7 ಹಾಗೂ ನಮೂನೆ-8 ಅನ್ನು ಪರಿಶೀಲಿಸಿ ಅಧಿಕಾರಿಗಳು ಕೈಗೊಂಡ ಕ್ರಮದ ಕುರಿತು ಅರ್ಜಿದಾರರಿಗೆ ಮಾರ್ಗದರ್ಶನ ಒದಗಿಸಲು ಸೂಚಿಸಿದರು.
ಹೆಬ್ಬಾಳ ವಿಧಾನಸಭಾ ಕ್ಷೆತ್ರದ ಸಂಜಯನಗರದ ಅಮರ ಜ್ಯೋತಿ ಲೇಔಟ್, ನಾಗಶೆಟ್ಟಿಹಳ್ಳಿಯ ಟೀಚರ್ಸ್ ಕಾಲೋನಿಯಲ್ಲಿ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು.
ಯಲಹಂಕ ವಿಧಾನಸಭಾ ಕ್ಷೇತ್ರದ ಪೂರ್ವಾಂಕರ ಅಪಾರ್ಟ್‌ಮೆಂಟ್‌ನಲ್ಲಿ ನಮೂನೆಯನ್ನು ಪರಿಶೀಲಿಸಿ, ಮತದಾರ ಸ್ಥಳಾಂತರ ಮಾಡಿಕೊಂಡಿರುವುದಾಗಿ ನಮೂನೆ-7ರ ಮೂಲಕ ಅರ್ಜಿ ಸಲ್ಲಿಸಿರುವ ಪ್ರಕಾರ ತಿರಸ್ಕರಿಸಲಾಗಿದೆ. ಮತ್ತೊಮ್ಮೆ ನಮೂನೆ ಸಲ್ಲಿಸಿದ್ದ ಪರಿಣಾಮ ತಿರಸ್ಕರಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅಂತರಿಕ್ಷಯಾನದ ಪರಿಕಲ್ಪನೆಯಡಿ ಜನವರಿ 7ರಂದು ಚಿತ್ರಸಂತೆ
ಮನೆ-ಮನೆಗೆ ಭೇಟಿ ನೀಡಿ ನಮೂನೆಗಳನ್ನು ಸೂಪರ್ ಚೆಕ್ಕಿಂಗ್ ಮಾಡಿ ಎಲ್ಲವೂ ಸರಿಯಿದ್ದು, ನಮೂನೆಗಳಿಗೆ ಮನೆಯವರ ಹೆಸರು, ವಿಳಾಸ, ಸಹಿ ಪರಿಶೀಲನೆಯ ಜತೆಗೆ ಎರಡು ಕಡೆ ಹೆಸರಿದ್ದಲ್ಲಿ ಅದನ್ನು ಸಂಬಂಧಪಟ್ಟ ಅಧಿಕಾರಿಯ ಜೊತೆ ಮಾತನಾಡಿ ಒಂದು ಕಡೆ ಹೆಸರನ್ನು ತೆಗೆಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಆರ್. ರಾಮಚಂದ್ರನ್, ಅಪರ ಜಿಲ್ಲಾ ಜಿಲ್ಲಾ ಚುನಾವಣಾಧಿಕಾರಿ(ಉತ್ತರ) ಸ್ನೇಹಲ್, ಮತದಾರ ನೋಂದಣಾಧಿಕಾರಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.