ಗಡಿ ಭಾಗವಾದ ಬೀದರ ಜಿಲ್ಲೆಯಲ್ಲಿ ಕನ್ನಡ ಮತ್ತು ಬಸವತತ್ವ ಪ್ರಸಾರಕ್ಕಾಗಿ ಹಗಲಿರಳು ಶ್ರಮಿಸಿದ ಭಾಲ್ಕಿ ಹಿರೇಮಠದ ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರ ಜೀವನ ಚರಿತ್ರೆಯನ್ನು ಶಾಲಾ ಪಠ್ಯದಲ್ಲಿಅಳವಡಿಸಲು ಆಗ್ರಹಿಸಿ ಬಸವಪರ ಸಂಘಟನೆಗಳು ಬಸವಕಲ್ಯಾಣದಲ್ಲಿ ಪ್ರತಿಭಟನೆ ನಡೆಸಿದರು.
ಈ ಕುರಿತು ಬಸವಪರ ಸಂಘಟನೆಗಳ ಒಕ್ಕೂಟದಿಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗರಪ್ಪಾ ಅವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು.
ದೇಶ ಸ್ವಾತಂತ್ರ್ಯಗೊಂಡ ನಂತರ ಕಲ್ಯಾಣ ಕರ್ನಾಟಕ ಭಾಗವು ಹೈದ್ರಬಾದ್ ನಿಜಾಂ ಆಳ್ವಿಕೆಗೆ ಒಳಪಟ್ಟಿತ್ತು. ಆವಾಗ ಕನ್ನಡ ಕಲಿಸುವುದು ಮತ್ತು ಕಲಿಯುವುದು ಅಪರಾಧವೆಂಬ ವಾತಾವರಣ ಸೃಷ್ಠಿಸಲಾಗಿತ್ತು. ಅಂತಹ ಕಾಲಘಟ್ಟದಲ್ಲಿ ಭಾಲ್ಕಿಯ ಚನ್ನಬಸವ ಪಟ್ಟದ್ದೇವರು ಹೊರಗಡೆ ಉರ್ದು ನಾಮಫಲಕ ಹಾಕಿ ಒಳಗಡೆ ಕನ್ನಡ ಕಲಿಸುವ ಮೂಲಕ ಈ ಭಾಗದಲ್ಲಿ ಕನ್ನಡ ಉಳಿಸಲು ಶ್ರಮಿಸಿದ್ದಾರೆ. ಕರ್ನಾಟಕದ ಏಕೀಕರಣ ವೇಳೆ ಬೀದರ ಜಿಲ್ಲೆ ಮಹಾರಾಷ್ಟ್ರಕ್ಕೆ ಸೇರದಂತೆ ಹೋರಾಟ ರೂಪಿಸಿ ಜಿಲ್ಲೆ ಕರ್ನಾಟಕದಲ್ಲಿ ಉಳಿಸುವಲ್ಲಿ ಶ್ರೀಗಳಿಗೆ ಪಾತ್ರ ಪ್ರಮುಖವಾಗಿತ್ತು ಎಂದು ಸಂಘಟಕರು ಹೇಳಿದರು.
ರಾಷ್ಟ್ರೀಯ ಬಸವ ದಳದ ತಾಲೂಕಾಧ್ಯಕ್ಷ ರವೀಂದ್ರ ಕೊಳಕೂರ್ ಮಾತನಾಡಿ, “ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳಾಗಿದ್ದ ಚನ್ನಬಸವ ಪಟ್ಟದ್ದೇವರು ಅನೇಕ ಶಿಕ್ಷಣ ಸಂಸ್ಥೆಗಳು ತೆರೆದು ಬಡವ, ನಿರ್ಗತಿಕ ಹಾಗೂ ಮಹಿಳೆಯರಿಗೆ ಶಿಕ್ಷಣ ಒದಗಿಸಲು ವಿಶೇಷ ಕಾಳಜಿವಹಿಸಿದ್ದರು. ಜ್ಞಾನ ದಾಸೋಹ, ಅನ್ನದಾಸೋಹಗೈದು ಅನೇಕ ವಿದ್ಯಾರ್ಥಿಗಳಿಗೆ ಬಾಳಿಗೆ ಬೆಳಕಾಗಿದ್ದರು. ಬಸವವಾದಿ ಶಿವಶರಣರ ತತ್ವಗಳನ್ನು ಅನುಷ್ಠಾನಗೊಳಿಸಲು ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಿಸಿದರು. ಶ್ರೀಗಳ ಕನಸಿನಂತೆ ಇಂದು ಬಸವಕಲ್ಯಾಣದಲ್ಲಿ ಬಹುಕೋಟಿ ಅನುದಾನದಲ್ಲಿ ನೂತನ ಅನುಭವ ಮಂಟಪ ನಿರ್ಮಾಣವಾಗುತ್ತಿದ್ದು, ಈ ಶ್ರೇಯಸ್ಸು ಲಿಂ.ಡಾ.ಚನ್ನಬಸವ ಪಟ್ಟದೇವರಿಗೆ ಸಲ್ಲುತ್ತದೆ” ಎಂದು ನುಡಿದರು.
ಸಾಮಾಜಿಕ, ಶೈಕ್ಷಣಿಕ ಹಾಗೂ ಬಸವವಾದಿ ಶರಣರ ವಚನ ಸಾಹಿತ್ಯವನ್ನು ನಾಡಿನಾದ್ಯಂತ ಪಸರಿಸಿದ ಶ್ರೀಗಳ ಸಮಾಜಮುಖಿ ಜೀವನ ಸಮಾಜಕ್ಕೆ ಆದರ್ಶವಾಗಿದೆ. ಈ ಭಾಗದ ನಡೆದಾಡುವ ದೇವರೆಂದೇ ಪ್ರಖ್ಯಾತಿ ಹೊಂದಿರುವ ಶ್ರೀಗಳ ಜೀವನ ಚರಿತ್ರೆ ಮುಂದಿನ ಪೀಳಿಗೆಗೆ ತಿಳಿಸುವುದು ಅತೀ ಅವಶಕವಾಗಿದೆ. ಸರ್ಕಾರ ಈಗಾಗಲೇ ಶಾಲಾ ಪಠ್ಯ ಮರುಪರಿಷ್ಕರಣೆ ಕಾರ್ಯ ಪ್ರಾರಂಭಿಸಿದೆ. ಅದರಲ್ಲಿ ಡಾ.ಚನ್ನಬಸವ ಪಟ್ಟದ್ದೇವರ ಬದುಕಿನ ಕುರಿತು ಶಾಲಾ ಪಠ್ಯದಲ್ಲಿ ಸೇರಿಸಬೇಕೆಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಪ್ರೀಮ್ ಕೋರ್ಟ್ ತೀರ್ಪಿಗೆ ತಿರುಮಂತ್ರ ಹಾಕಿದ ಮೋದಿ ಸರ್ಕಾರ!
ಈ ಸಂದರ್ಭದಲ್ಲಿ ಬಸವಪರ ಸಂಘಟನೆಗಳ ಪ್ರಮುಖರಾದ ಶಿವಕುಮಾರ ಬಿರಾದರ
ಜಗನ್ನಾಥ ಪಾಟೀಲ, ವಿವೇಕ ನಾಗರಾಳೆ, ಪಂಡಿತ ನಾಗರಾಳೆ, ಗಂಗಾಧರ, ಶಂಕರ, ಶಿವು ಕುದರೆ, ಲಕ್ಷ್ಮಿಕಾಂತ ಜ್ಯಾಂತೆ ಸೇರಿದಂತೆ ಇತರರಿದ್ದರು.