ರಾಜ್ಯ ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ 2 ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣಗಳ ಪೈಕಿ ಒಂದಾಗಿದೆ.
“ಯುನೆಸ್ಕೋದ ಪ್ರಿಕ್ಸ್ ವರ್ಸೈಲ್ಸ್‌ನಿಂದ 2023ರ ಆಂತರಿಕ ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಮನ್ನಣೆಯನ್ನು ಪಡೆದ ಏಕೈಕ ಭಾರತೀಯ ವಿಮಾನ ನಿಲ್ದಾಣವಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ 2ನ ಒಳಾಂಗಣ ವಿನ್ಯಾಸ 2023ರ ವಿಶ್ವ ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡಿದೆ” ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಗುರುವಾರ ತಿಳಿಸಿದೆ.
“ಬೆಂಗಳೂರು ವಿಮಾನ ನಿಲ್ದಾಣವು ಈ ಗೌರವಾನ್ವಿತ ಮನ್ನಣೆಯನ್ನು ಪಡೆದ ಏಕೈಕ ಭಾರತೀಯ ವಿಮಾನ ನಿಲ್ದಾಣವಾಗಿದ್ದು, ಜಾಗತಿಕ ಮಟ್ಟದಲ್ಲಿ ಅಸಾಧಾರಣ ವಿನ್ಯಾಸ ಮತ್ತು ವಾಸ್ತುಶಿಲ್ಪದ ಕಡೆಗೆ ಅದರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಪ್ರಸಿದ್ಧ ಫ್ಯಾಷನ್ ಡಿಸೈನರ್ ಎಲೀ ಸಾಬ್ ರವರ ಅಧ್ಯಕ್ಷತೆಯಲ್ಲಿ ಯುನೆಸ್ಕೋದ ಪ್ರಿಕ್ಸ್ ವರ್ಸೈಲ್ಸ್ 2023 ಕಾರ್ಯಕ್ರಮ ನಡೆಯಿತು. ಬೆಂಗಳೂರು ವಿಮಾನ ನಿಲ್ದಾಣವನ್ನು ಜಾಗತಿಕವಾಗಿ ಉನ್ನತ ವಿಮಾನ ನಿಲ್ದಾಣಗಳ ಪಟ್ಟಿಗೆ ಸೇರಿದೆ” ಎಂದು ಬಿಐಎಎಲ್ ಪ್ರಕಟಣೆ ತಿಳಿಸಿದೆ.
‘ಟರ್ಮಿನಲ್ ಇನ್ ಎ ಗಾರ್ಡನ್’ ಎಂದು ಕರೆಯಲ್ಪಡುವ ಟರ್ಮಿನಲ್ 2 ವಿಮಾನ ನಿಲ್ದಾಣವನ್ನು 2022ರ ನವೆಂಬರ್ 11ರಂದು ಉದ್ಘಾಟನೆ ಮಾಡಲಾಯಿತು. 2,55,661 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಈ ಟರ್ಮಿನಲ್ ಅನ್ನು ನಾಲ್ಕು ಅಡಿಪಾಯದ ಕಂಬಗಳ ಮೇಲೆ ನಿರ್ಮಿಸಲಾಗಿದೆ. ವರ್ಷಕ್ಕೆ 25 ಮಿಲಿಯನ್ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ಈ ಟರ್ಮಿನಲ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಬಿಐಎಎಲ್ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮನೆ-ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆಯ ಪರಿಶೀಲನೆ
ಟರ್ಮಿನಲ್ 2 ಸಂಪೂರ್ಣವಾಗಿ ಸಂಸ್ಕರಿಸಿದ ಬಿದಿರಿನಿಂದ ರಚಿಸಲಾಗಿದೆ. ಒಳಾಂಗಣಗದಲ್ಲಿ ಹಸಿರಿನ ವಾತಾವರಣ ತುಂಬಿದೆ. ಇಟ್ಟಿಗೆ ಗೋಡೆಗಳು ಹಾಗು ಕೃತಕ ಜಲಪಾತದಿಂದ ಅಲಂಕೃತಗೊಂಡಿದೆ. ಒಂದು ವಿಶಾಲವಾದ ಒಳಾಂಗಣ ಉದ್ಯಾನವನವನ್ನೇ ಹೊಂದಿದೆ. ಹಾಗೆಯೇ, ಮೇಲ್ಭಾಗದಲ್ಲಿ ಗಂಟೆಯೊಳಗಿರುವ ಸಸ್ಯಗಳು ಸಹ ಟರ್ಮಿನಲ್‌ನ ಸೌಂದರ್ಯವನ್ನು ಹೆಚ್ಚಿಸುತ್ತದೆ.
2015 ರಲ್ಲಿ ಸ್ಥಾಪನೆಯಾದ ಪ್ರಿಕ್ಸ್ ವರ್ಸೈಲ್ಸ್, ಸಾಂಸ್ಕೃತಿಕ ಸಂಚಾಲಕರಾಗಿ ಬುದ್ಧಿವಂತ ಸಮರ್ಥನೀಯತೆ ಮೇಲೆ ಕೇಂದ್ರೀಕರಿಸುತ್ತದೆ. ನಾವೀನ್ಯತೆ, ಸೃಜನಶೀಲತೆ, ಸ್ಥಳೀಯ ಪರಂಪರೆಯ ಪ್ರತಿಬಿಂಬ, ಪರಿಸರ ದಕ್ಷತೆ ಮತ್ತು ಸಾಮಾಜಿಕ ಸಂವಹನದ ಮೌಲ್ಯಗಳನ್ನು ಅಂಗೀಕರಿಸುತ್ತದೆ ಎಂದು ಬಿಐಎಎಲ್ ಹೇಳಿಕೆ ತಿಳಿಸಿದೆ.