ಕೋಮುಸೂಕ್ಷ್ಮ ಪಟ್ಟಣವಾಗಿರುವ ಗಂಗಾವತಿಯಲ್ಲಿ ಇಂದು ಹಿಂದುತ್ವ ಕೋಮುವಾದಿ ಸಂಘಟನೆ ವಿಶ್ವ ಹಿಂದು ಪರಿಷತ್ ಸಂಕೀರ್ತನಾ ಯಾತ್ರೆಯನ್ನು ಹಮ್ಮಿಕೊಂಡಿದೆ. ಸಾವಿರಾರು ಹನುಮ ಮಾಲಾಧಾರಿಗಳು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟನೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಡಿಸೆಂಬರ್ 24ರಂದು ಬೃಹತ್ ಪೂಜೆ ಹಮ್ಮಿಕೊಳ್ಳಲಾಗಿದೆ. ಉತ್ತರ ಕರ್ನಾಟಕದ ಭಾಗದ ಹನುಮ ಮಾಲಾಧಾರಿಗಳು ಅಂದು ಬೆಟ್ಟದಲ್ಲಿ ಮಾಲೆ ವಿಸರ್ಜನೆ ಮಾಡಲಿದ್ದಾರೆ. ಪ್ರತಿ ವರ್ಷ ಅದೇ ದಿನ ಸಂಕೀರ್ತನಾ ಯಾತ್ರೆಯನ್ನು ವಿಎಚ್‌ಪಿ ನಡೆಸುತ್ತಿತ್ತು. ಆದರೆ, ಈ ಬಾರಿ ಎರಡು ದಿನಗಳ ಮೊದಲೇ ಯಾತ್ರೆಯನ್ನು ಹಮ್ಮಿಕೊಂಡಿದೆ.
ಹೀಗಾಗಿ, ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು. ಕೋಮು ದ್ವೇಷದ ಘೋಷಣೆಗಳನ್ನು ಕೂಗದಂತೆ ನೋಡಿಕೊಳ್ಳಲು ಹಾಗೂ ಶಾಂತಿ ಕದಡುವ ಕೆಲಸಗಳಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪಟ್ಟಣದಲ್ಲಿ99 ಸಿಸಿಟಿವಿ ಅಳವಡಿಸಲಾಗಿದೆ. ಇಬ್ಬರು ಡಿವೈಎಸ್‌ಪಿ, 26 ಸಿಪಿಐ, 62 ಪಿಎಸ್‌ಐ ಸೇರಿ 1,650 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.