ಕಾಲೇಜು ಶಿಕ್ಷಣ ಇಲಾಖೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಗತ್ಯವಾಗಿ ಭರ್ತಿ ಮಾಡಬೇಕಿರುವ 347 ಗ್ರೂಪ್-ಡಿ ನೌಕರರು ಮತ್ತು 102 ಡಾಟಾ ಎಂಟ್ರಿ ನೌಕರರನ್ನು (ಒಟ್ಟು 449) ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯ ಪಾಲನೆಗಾಗಿ ಮೀಸಲಾತಿ ಪದ್ದತಿಯನ್ನು ಅನುಸರಿಸಲು ಕೂಡ ನಿರ್ಧರಿಸಿದೆ.
ವಿಧಾನಸೌಧದಲ್ಲಿ ಗುರುವಾರ ಸಚಿವ ಸಂಪುಟ ಸಭೆ ನಡೆದಿದೆ. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್ ಮಾತನಾಡಿದ್ದಾರೆ. “ರಾಜ್ಯದ 8 ಜಿಲ್ಲೆಗಳಲ್ಲಿ ವಾಸಿಸುತ್ತಿರುವ 11 ಬುಡಕಟ್ಟು ಪಂಗಡ – ಕೊರಗ, ಜೇನುಕುರುಬ, ಸೋಲಿಗ, ಎರವ, ಕಾಡುಕುರುಬ, ಮಲೆಕುಡಿಯ, ಸಿದ್ದಿ, ಹಸಲರು, ಗೌಡಲು, ಗೊಂಡ ಮತ್ತು ಬೆಟ್ಟಕುರುಬ – ಜನಾಂಗದ ಒಟ್ಟು 47,859 ಕುಟುಂಬಗಳಿಗೆ ಪೌಷ್ಟಿಕ ಆಹಾರವನ್ನು ಉಚಿತವಾಗಿ ಸರಬರಾಜು ಮಾಡಲು ಟೆಂಡರ್ ಆಹ್ವಾನಿಸಿ, ಆಹಾರ ಖರೀದಿಸಲು ಅನುಮೋದನೆ ದೊರೆತಿದೆ” ಎಂದು ಅವರು ತಿಳಿಸಿದ್ದಾರೆ.
“ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ನಿರ್ಧರಿಸಲಾಗಿದೆ. ಕೆಎಸ್‌ಆರ್‌ಟಿಸಿ ಎಲ್ಲ ನಿಗಮಗಳಿಂದ ಒಟ್ಟು 750 ಎಲೆಕ್ಟ್ರಿಕ್ ಬಸ್‍ಗಳನ್ನು ಜೆಸಿಸಿ ಆಧಾರದಲ್ಲಿ ಕಾರ್ಯಾಚರಣೆಗೆ ತರಲು ಅನುಮೋದನೆ ದೊರೆತಿದೆ” ಎಂದು ತಿಳಿಸಿದ್ದಾರೆ.
“ರಾಜ್ಯ ನೀರಾವರಿ (ನೀರಿನ ಕರ ವಿಧಿಸುವಿಕೆ) ನಿಯಮಗಳು-1965ಕ್ಕೆ ತಿದ್ದುಪಡಿ ಮಾಡಲು ಅಧಿಸೂಚನೆ ಹೊರಡಿಸಲು ನಿರ್ಧರಿಸಲಾಗಿದೆ. ಕಾಲುವೆ, ಕೆರೆ, ಜಲಾಶಯಗಳ ಮೂಲಕ ಒದಗಿಸುವ ನೀರಿಗೆ ಪ್ರತಿ ಎಂಸಿಎಫ್‌ಟಿಗೆ 3 ಲಕ್ಷ ರೂ. ಹಾಗೂ ರಾಜಧನ, ನೈಸರ್ಗಿಕ ಜಲಮಾರ್ಗ, ನದಿ, ಹಳ್ಳಗಳಿಂದ ಒದಗಿಸುವ ಪ್ರತಿ ಎಂಸಿಎಫ್‌ಟಿಗೆ 1.50 ಲಕ್ಷ ರೂ. ರಾಜಧನ ನಿಗದಿಪಡಿಸಲು ಅನುಮೋದನೆ ದೊರೆತಿದೆ. ಅಲ್ಲದೆ, ರಾಜ್ಯದ ವಿವಿಧ ನೀರಾವರಿ ಯೋಜನೆಗಳ ಕಾಮಗಾರಿಗಳಿಗೆ 36.98 ಕೋಟಿ ರೂ.ಮೊತ್ತದ ಆಸ್ತಿ ಮತ್ತು ಹೊಣೆಗಾರಿಕೆಯನ್ನು ರಾಜ್ಯ ನೀರಾವರಿ ನಿಗಮದಿಂದ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಹಸ್ತಾಂತರಿಸಲು ಅನುಮೋದಿಸಲಾಗಿದೆ” ಎಂದು ವಿವರಿಸಿದ್ದಾರೆ.
“ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿರುವ ಲ್ಯಾಬ್‍ಗಳಿಗೆ ರಾಸಾಯನಿಕಗಳು ಹಾಗೂ ಕಂಪ್ಯೂಟರ್ ರೇಡಿಯಾಗ್ರಫಿ ಸಿಸ್ಟಂಗಳಿಗೆ ಡ್ರೈ ಲೇಸರ್ ಎಕ್ಸ್ ರೇ ಫಿಲ್ಮ್ ಮತ್ತು ಪರಿಕರಗಳನ್ನು ರಾಷ್ಟ್ರೀಯ ಉಚಿತ ರೋಗ ಪತ್ತೆ ಮತ್ತು ಉಚಿತ ಔಷಧಿ ಸೇವೆಗಳ ಕಾರ್ಯಕ್ರಮದಡಿ ಖರೀದಿಸಲು ನಿರ್ಧರಿಸಲಾಗಿದೆ” ಎಂದಿದ್ದಾರೆ.
“ಮೈಸೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಭವನದ ಕಾಮಗಾರಿ ಪೂರ್ಣಗೊಳಿಸಲು 19.10 ಕೋಟಿ ರೂ. ಬಿಡಗಡೆಗೆ ಅನುಮೋದನೆ ಸಿಕ್ಕಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನಲ್ಲಿ ಹೊಸ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿಗೆ 12 ಕೋಟಿ ರೂ. ಮೊತ್ತದ ಅಂದಾಜು ಪಟ್ಟಿಗೂ ಅನುಮೋದನೆ ದೊರೆತಿದೆ” ಎಂದು ಎಚ್.ಕೆ ಪಾಟೀಲ್ ಹೇಳಿದ್ದಾರೆ.