ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಈ ಹಿಂದೆ ಕೋವಿಡ್ ಸೋಂಕಿನಿಂದ ಸಾವಿರಾರು ಜನ ಸಾವನ್ನಪ್ಪಿದ್ದರು. ಈ ವೇಳೆ, ಮೃತಪಟ್ಟವರನ್ನು ಅಂತ್ಯಸಂಸ್ಕಾರ ಮಾಡಲು ಚಿತಾಗಾರದ ಸಮಸ್ಯೆ ಉಂಟಾಗಿತ್ತು. ಹೀಗಾಗಿ, ಮುಂಜಾಗೃತಾ ಕ್ರಮವಾಗಿ ಸೋಂಕಿನಿಂದ ಯಾರಾದರೂ ಮೃತಪಟ್ಟರೆ, ಅವರನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲು ಪಾಲಿಕೆ ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಮೃತದೇಹ ಸಾಗಿಸಲು ಕೂಡ ಆ್ಯಂಬುಲೆನ್ಸ್ ಅಥವಾ ಬೇರೆ ವಾಹನ ಸಿಗದೆ ಜನರು ಪರದಾಡುವಂತಾಗಿತ್ತು. ಈ ಬಾರಿ ಅದನ್ನು ತಪ್ಪಿಸಲು ಮೃತದೇಹವನ್ನು ಚಿತಾಗಾರಗಳಿಗೆ ತೆಗೆದುಕೊಂಡು ಹೋಗಲು 8 ವಲಯಕ್ಕೆ ತಲಾ ಒಂದು ಆ್ಯಂಬುಲೆನ್ಸ್ ಮೀಸಲಿಡಲಾಗುತ್ತಿದೆ.
ಸದ್ಯ ಕೊರೋನಾ ಸೋಂಕಿನಿಂದ ಸಾವನಪ್ಪುವವರ ಸಂಖ್ಯೆ ಕಡಿಮೆಯಿರುವ ಕಾರಣ ವಲಯಕ್ಕೊಂದು ಆ್ಯಂಬುಲೆನ್ಸ್ ಮೀಸಲಿಡಲಾಗಿದೆ. ಮುಂದೆ ಪ್ರಮಾಣ ಹೆಚ್ಚಾದರೆ ಆ್ಯಂಬುಲೆನ್ಸ್ ಸಂಖ್ಯೆ ಹೆಚ್ಚಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಅಂತ್ಯ ಸಂಸ್ಕಾರಕ್ಕೆ ಚಿತಾಗಾರಗಳಲ್ಲಿ ತೀವ್ರ ಸಮಸ್ಯೆ ಉಂಟಾಗಿತ್ತು. ಬೆಂಗಳೂರಿನಲ್ಲಿ 12 ವಿದ್ಯುತ್ ಚಿತಾಗಾರಗಳಿದ್ದು, ಈ ಪೈಕಿ ಸುಮನಹಳ್ಳಿ, ಮೇಟಿ ಅಗ್ರಹಾರ, ಬನಶಂಕರಿ, ಹೆಬ್ಬಾಳ ಚಿತಾಗಾರಗಳು ಸೇರಿದಂತೆ ಒಟ್ಟು ನಾಲ್ಕು ಚಿತಾಗಾರಗಳನ್ನು ಅಂತ್ಯಕ್ರಿಯೆಗೆ ಮೀಸಲಿಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜಿನೊಮಿಕ್ ಸೀಕ್ವೆನ್ಸ್ಗೆ 45 ಸ್ಯಾಂಪಲ್ ಕಳಿಸಿದ ಆರೋಗ್ಯ ಇಲಾಖೆ
ರುದ್ರಭೂಮಿ ಹಾಗೂ ಚಿತಾಗಾರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಆರೋಗ್ಯ ಹಿತದೃಷ್ಟಿಯಿಂದ ಬಿಬಿಎಂಪಿ ಸುರಕ್ಷತೆ ಕ್ರಮ ಕೈಗೊಳ್ಳುತ್ತಿದೆ. ಬಿಬಿಎಂಪಿಯ ಎಲ್ಲ ಚಿತಾಗಾರ ಹಾಗೂ ರುದ್ರಭೂಮಿಗಳಲ್ಲಿ ಕಾರ್ಯನಿರ್ವಹಿಸುವ 148 ಮಂದಿಗೆ ಪಿಪಿಇ ಕಿಟ್ ನೀಡುವುದಕ್ಕೆ ಪಾಲಿಕೆ ಮುಂದಾಗಿದೆ. ಇದಕ್ಕೆ ಅನುಮತಿ ಕೋರಿ ಬಿಬಿಎಂಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎನ್ನಲಾಗಿದೆ.