ಕೊಪ್ಪಳದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಒಟ್ಟು 3,469 ವಿದ್ಯಾರ್ಥಿಗಳು ಪದವಿ ಅಭ್ಯಾಸ ಮಾಡುತ್ತಿದ್ದು, ಅವರಿಗೆ ಕೇವಲ ಎರಡೇ ಶೌಚಾಲಯಗಳಿದ್ದು, ಪ್ರತೀ ನಿತ್ಯ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಕಾಲೇಜಿನಲ್ಲಿ 2,306 ಜನ ಬಾಲಕರು ಮತ್ತು 1,163 ಮಂದಿ ಬಾಲಕಿಯರು ಇದ್ದಾರೆ. ಬಿಎ, ಬಿಎಸ್ಸಿ, ಬಿಕಾಂ, ಬಿಸಿಎ ಹಾಗೂ ಪತ್ರಿಕೋದ್ಯಮ ಸೇರಿದಂತೆ ಹಲವು ಕೋರ್ಸ್‌ಗಳಿವೆ. ಇತ್ತೀಚೆಗೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಅರ್ಹತಾ ಪರಿಷತ್ತಿನ (ನ್ಯಾಕ್) ಉನ್ನತ ಸಮಿತಿ ಸದಸ್ಯರು ಕಾಲೇಜಿನ ಚಟುವಟಿಕೆಗಳನ್ನು ಪರಿಶೀಲಿಸಿ, ‘ಎ’ ಗ್ರೇಡ್ ನೀಡಿದ್ದಾರೆ. ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಈ ಕಾಲೇಜು ನ್ಯಾಕ್ ಸಮಿತಿಯ ವರದಿಯಲ್ಲಿ ಅಗ್ರಸ್ಥಾನದಲ್ಲಿದೆ.
ಆದರೆ, ವಿದ್ಯಾರ್ಥಿಗಳಿಗೆ ಮೂಲಸೌಕರ್ಯದ ಕೊರತೆ ಕಾಡುತ್ತಿದೆ. ನೆಲಮಹಡಿಯಲ್ಲಿ ಎರಡು ಶೌಚಾಲಯಗಳಿದ್ದು. ದುರಸ್ತಿಯಾಗಿಲ್ಲ. ಪುರುಷರ ಶೌಚಾಲಯದಲ್ಲಿ ಕಾಲೇಜಿನ ವ್ಯರ್ಥ ಹಾಗೂ ಹಾಳಾದ ಸಾಮಗ್ರಿಗಳನ್ನು ಸಂಗ್ರಹಿಸಿ ಇರಿಸಲಾಗಿದೆ. ಮೊದಲ ಮಹಡಿಯಲ್ಲಿರುವ ಪುರುಷರ ಮತ್ತು ಮಹಿಳೆಯರ ತಲಾ ಒಂದು ಶೌಚಾಲಯ ಮಾತ್ರ ಬಳಕೆಗೆ ಯೋಗ್ಯವಿದ್ದು, ಇವೇ ವಿದ್ಯಾರ್ಥಿಗಳಿಗೆ ಆಸರೆಯಾಗಿವೆ.
ಈ ಕಾಲೇಜು ನಗರದ ಮಧ್ಯಭಾಗದಲ್ಲಿದ್ದು, ಸಮೀಪದಲ್ಲಿ ಸರ್ಕಾರಿ ಶಾಲೆ, ತಾಲ್ಲೂಕು ಕ್ರೀಡಾಂಗಣವಿದೆ. ಸದಾ ಜನನಿಬಿಡ ಪ್ರದೇಶವಾದ ಕಾರಣ ವಿದ್ಯಾರ್ಥಿಗಳಿಗೆ ಬಯಲು ಶೌಚಕ್ಕೆ ಹೋಗಲೂ ಅವಕಾಶವಿಲ್ಲ. ಇಷ್ಟೊಂದು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳನ್ನು ನಿರ್ವಹಣೆ ಮಾಡಲು ಸಾಧ್ಯವಾಗದಕ್ಕೆ ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರ ತನಕ ಮತ್ತು 12ರ ಬಳಿಕ ಸಂಜೆ 4.30ರ ತನಕ ಎರಡು ಹಂತದಲ್ಲಿ ವಿವಿಧ ಕೋರ್ಸ್‌ಗಳಿಗೆ ಪಾಠ ಮಾಡಲಾಗುತ್ತಿದೆ. ಕಾಲೇಜಿಗೆ ನಗರದ ಹೊರವಲಯದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆಯಾದರೂ ಇನ್ನೂ ಸ್ಥಳಾಂತರಗೊಂಡಿಲ್ಲ.
ವಿಜ್ಞಾನದ ಪ್ರಯೋಗಗಳಿಗೆ ಲ್ಯಾಬ್ ಸೌಲಭ್ಯ ಉತ್ತಮವಾಗಿರುವ ಕಾರಣ ಕೊಪ್ಪಳದ ಗ್ರಾಮೀಣ ಪ್ರದೇಶ, ಗಂಗಾವತಿ, ಕುಷ್ಟಗಿ ತಾಲೂಕು ಹಾಗೂ ಹಗರಿಬೊಮ್ಮನಳ್ಳಿಯಿಂದಲೂ ಈ ಕಾಲೇಜಿಗೆ ವಿದ್ಯಾರ್ಥಿಗಳು ಬರುತ್ತಾರೆ.
ಸಾವಿರಾರು ಸಂಖ್ಯೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಸಮರ್ಪಕ ಶೌಚಾಲಯವಿಲ್ಲ. ಹಳ್ಳಿಗಳಿಂದ ಬೆಳಿಗ್ಗೆಯೇ ಕಾಲೇಜಿಗೆ ಬಂದರೂ ಸರಿಯಾಗಿ ನೀರು ಕುಡಿಯಲು ಆಗುವುದಿಲ್ಲ. ನೀರು ಕುಡಿದರೆ ಪದೇ ಪದೇ ಶೌಚಕ್ಕೆ ಹೋಗಬೇಕಾಗುತ್ತದೆ ಎಂಬ ಆತಂಕದಲ್ಲಿ, ನೀರು ಕುಡಿಯುಲು ಯೋಚಿಸಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ವಿದ್ಯಾರ್ಥಿನಿಯರು.