ನಾಲ್ಕು ಗೋಡೆಗಳ ಮಧ್ಯೆ ನಡೆದ ಜಾತಿ ಜನಗಣತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳು ಸಿಗಬೇಕು. ಪ್ರಸ್ತುತ ಜಾತಿ ಜನಗಣತಿ ಸ್ವೀಕಾರಕ್ಕೆ ಪಕ್ಷಾತೀತವಾಗಿ ಲಿಂಗಾಯತ ಶಾಸಕರ ವಿರೋಧವಿದೆ ಎಂದು ನರಗುಂದ ಶಾಸಕ ಸಿ ಸಿ ಪಾಟೀಲ್ ತಿಳಿಸಿದರು.
ಶುಕ್ರವಾರ ಗದಗ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ಸಿನ ಶಾಮನೂರ ಶಿವಶಂಕರಪ್ಪ ಅವರೇ ಜಾತಿ ಜನಗಣತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅರವಿಂದ ಬೆಲ್ಲದ ಸಹಿತ ಅನೇಕ ಲಿಂಗಾಯತ ಶಾಸಕರು ನಾಲ್ಕು ಗೋಡೆಗಳ ಮಧ್ಯೆ ತಯಾರಾದ ವರದಿ ಜಾರಿಯಾಗುವುದು ಬೇಡ ಎಂದಿದ್ದಾರೆ” ಎಂದರು.
“ಕೇವಲ ಲಿಂಗಾಯತ ಸಮುದಾಯವನ್ನು ಗುರಿಯಾಗಿಸಿಕೊಂಡು ವರದಿ ಸಿದ್ಧಪಡಿಸಲಾಗಿದೆ. ಈ ಬಗ್ಗೆ ಸಚಿವ ವಿನಯ ಕುಲಕರ್ಣಿ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಕ್ಷಿ ಮಲಿಕ್ ʼಶೂʼಗಳು ಭಾರತದ ಆತ್ಮಸಾಕ್ಷಿಯನ್ನು ಅಣಕಿಸುವ ಸಂಕೇತವಾಗಿ ಉಳಿಯಲಿದೆ
ಮಲ್ಲಿಕಾರ್ಜುನ ಖರ್ಗೆ ವಿಚಾರವಾಗಿ ಪ್ರತಿಕ್ರಿಯಿಸಿ, “ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪವಾಗಿರುವುದು ನೋಡಿದರೆ, ಕಾಂಗ್ರೆಸ್ ನೆಹರು ಕುಟುಂಬದ ಪ್ರಭಾವದಿಂದ ಹೊರಬರುವ ಲಕ್ಷಣಗಳು ಕಾಣುತ್ತಿವೆ. ಕಾಂಗ್ರೆಸ್ ವರಿಷ್ಠರೆ ಮಮತಾ ಬ್ಯಾನರ್ಜಿ ಮೂಲಕ ಖರ್ಗೆ ಹೆಸರು ಮುನ್ನಲೆಗೆ ತಂದ್ದಾರೆ ಎನ್ನುವುದು ನನ್ನ ಭಾವನೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಹುಮತ ಬರುವುದಿಲ್ಲ ಎನ್ನುವ ಸ್ಪಷ್ಟ ಅರಿವಿದೆ. ಆ ಕಾರಣಕ್ಕಾಗಿ ಪ್ರಧಾನಿ ಅಭ್ಯರ್ಥಿ ಪ್ರಸ್ತಾಪವನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ” ಎಂದು ತಿಳಿಸಿದರು.