ಜನವರಿಯಿಂದ ಪ್ರತಿ ತಾಲೂಕಿನಲ್ಲಿಯೂ ಜನಸ್ಪಂದನ ಕಾರ್ಯಕ್ರಮ ನಡೆಸಿ, ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಲಾಗುವುದು ಎಂದು ಆರೋಗ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮೂಡಬಿದ್ರೆ ಮಿನಿ ವಿಧಾನಸೌಧದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಜನರ ಅರ್ಜಿಗಳಿಗೆ ಅಧಿಕಾರಿಗಳು ಸರಿಯಾದ ಸ್ಪಂದನೆ ನೀಡಬೇಕು. ಕಾಲ ಮಿತಿಯಲ್ಲಿ ಜನರ ಸಮಸ್ಯೆಗಳನ್ನು ಪರಿಹರಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ” ಎಂದು ಸಚಿವರು ಹೇಳಿದರು.
“ನಿಗದಿತವಾಗಿ ಕೆಡಿಪಿ ಸಭೆಯನ್ನು ನಡೆಸಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಬೇಕು. ರಾಜ್ಯ ಸರ್ಕಾರವು ಜನತೆಗೆ ನೀಡಿದ ಆಶ್ವಾಸನೆಯ 4 ಗ್ಯಾರಂಟಿಗಳನ್ನು ಈಗಾಗಲೇ ಜನತೆಯ ಮುಂದಿಟ್ಟಿದೆ. ಕೊನೆಯ ಗ್ಯಾರಂಟಿ “ಯುವನಿಧಿ” ಯೋಜನೆಗೆ ಜನವರಿ 12ರಂದು ಚಾಲನೆ ನೀಡಲಾಗುವುದು” ಎಂದು ಸಚಿವರು ತಿಳಿಸಿದರು.
“ರಾಜ್ಯ ಸರ್ಕಾರದ ಯೋಜನೆಗಳು ಜನರಿಗೆ ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ತಲುಪುತ್ತಿವೆ. ಇದರಿಂದ ಜನತೆಯಲ್ಲಿ ನೆಮ್ಮದಿ ಮೂಡಿದೆ” ಎಂದು ಸಚಿವರು ಹೇಳಿದರು.
ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಲು ಫಲಾನುಭವಿಗಳು ಈವರೆಗೆ ತಮ್ಮ ಪಾಲಿನ ವಂತಿಗೆಯಾಗಿ ₹4.50 ಲಕ್ಷ ಪಾವತಿಸಬೇಕಿತ್ತು. ಇದನ್ನು ₹1 ಲಕ್ಷಕ್ಕೆ ಇಳಿಸುವ ಕ್ರಾಂತಿಕಾರಿ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಇದರಿಂದ ಅರ್ಧದಲ್ಲಿಯೇ ನಿಂತಿದ್ದ ಮನೆ ನಿರ್ಮಾಣ ಕಾಮಗಾರಿಗಳು ಚುರುಕುಗೊಳ್ಳಲಿವೆ. ಹಂತ ಹಂತವಾಗಿ ವಸತಿ ಯೋಜನೆಗಳು ಸಂಪೂರ್ಣಗೊಳ್ಳಲಿದೆ” ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಕೃಷಿಗೆ ನೀರಿಲ್ಲ; ಕುಡಿಯುವ ಉದ್ದೇಶಕ್ಕೆ ಕೆಆರ್‌ಎಸ್ ನೀರು ಮೀಸಲು: ಕೃಷಿ ಸಚಿವ
ಸಚಿವರು ಈ ಸಂದರ್ಭದಲ್ಲಿ ಹಕ್ಕುಪತ್ರ ಹಾಗೂ ಪಿಂಚಣಿ ಮಂಜೂರಾತಿಗಳನ್ನು ವಿತರಿಸಿದರು. ಈ ವೇಳೆ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಉಪವಿಭಾಗಾಧಿಕಾರಿ ಹರ್ಷವರ್ಧನ್, ಮೂಡಬಿದರೆ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಇದ್ದರು.