ಆದಿವಾಸಿ ಜನರಿಗೆ ಪೌಷ್ಠಿಕ ಆಹಾರ ಸೇರಿದಂತೆ ಇತರೆ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಅಖಿಲ ಭಾರತ ಜನಾಧಿಕಾರ ಸುರಕ್ಷಾ ಸಮಿತಿಯಿಂದ ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ಜನಾಧಿಕಾರ ಸುರಕ್ಷಾ ಸಮಿತಿಯಿಂದ ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
“ರಾಜ್ಯದ 8 ಜಿಲ್ಲೆಗಳಲ್ಲಿ ವಾಸಿಸುತ್ತಿರುವ 11 ಬುಡಕಟ್ಟು ಪಂಗಡಗಳಾದ ಕೊರಗ, ಜೇನುಕುರುಬ, ಸೋಲಿಗ, ಎರವ, ಕಾಡುಕುರುಬ, ಮಲೆಕುಡಿಯ, ಸಿದ್ದಿ, ಹಸಲರು, ಗೌಡಲು, ಗೊಂಡ ಮತ್ತು ಬೆಟ್ಟಕುರುಬ ಜನಾಂಗದ ಕುಟುಂಬಗಳಿಗೆ ಈ ಹಿಂದೆ ಪೌಷ್ಟಿಕ ಆಹಾರ ಯೋಜನೆಯನ್ನು ವಾರ್ಷಿಕ ಆರು ತಿಂಗಳುಗಳಿಗೆ ನೀಡಲಾಗುತ್ತಿದ್ದು, ನಾಲ್ಕೈದು ವರ್ಷಗಳ ನಿರಂತರ ಹೋರಾಟದ ನಂತರ ಇದನ್ನು 12 ತಿಂಗಳಿಗೆ ವಿಸ್ತರಿಸಲು ಇದಕ್ಕೆ ವಾರ್ಷಿಕವಾಗಿ 50 ಕೋಟಿ ರೂ.ಗಳನ್ನು ಒದಗಿಸಲಾಗುವುದೆಂದು ಕಳೆದ ರಾಜ್ಯ ಬಜೆಟ್‌ನಲ್ಲಿ ಘೋಷಿಸಿ ಇಲ್ಲಿಗೆ ಆರು ತಿಂಗಳಾಯಿತು. ಕೇವಲ ಒಂದು ಬಾರಿ ಮಾತ್ರ ಪೌಷ್ಟಿಕ ಆಹಾರ ಸಾಮಗ್ರಿಯನ್ನು ವಿತರಿಸಿದ್ದಾರೆ. ಆದಿವಾಸಿಗಳಿಗೆ ನೀಡುತ್ತಿದ್ದ ಪೌಷ್ಠಿಕ ಆಹಾರ ಸಾಮಗ್ರಿಗಳನ್ನು ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ವಿತರಿಸಬೇಕು” ಎಂದು ಒತ್ತಾಯಿಸಿದರು.
“ರಾಜ್ಯದ ಬಹುತೇಕ ಆದಿವಾಸಿ ಜನರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ತೀವ್ರ ಬಡತನದಲ್ಲಿ ಭೂಮಿಯು ಇಲ್ಲದೆ ಕೆಲವೊಮ್ಮೆ ಕೂಲಿಯೂ ಸಿಗದೇ ಬಹಳ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಆದಿವಾಸಿ ಜನರಿಗೆ ಅವರ ಅಪೌಷ್ಠಿಕತೆಯನ್ನು ಹೋಗಲಾಡಿಸುವುದಕ್ಕಾಗಿ ಅವರಿಗೆ ನೀಡುತ್ತಿದ್ದ ಪೌಷ್ಠಿಕ ಆಹಾರ ಸಾಮಗ್ರಿಗಳನ್ನು ವರ್ಷವಿಡೀ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ವಿತರಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಎನ್‌ಎಚ್66ರ ರಸ್ತೆ ಕಾಮಗಾರಿ ಮಾರ್ಚ್ ವೇಳೆಗೆ ಪೂರ್ಣ: ಮೇಯರ್ ಸುಧೀರ್ ಶೆಟ್ಟಿ
“ಪೌಷ್ಠಿಕ ಆಹಾರದ ಜತೆಗೆ ಶಿಕ್ಷಣ, ಆರೋಗ್ಯ, ಉದ್ಯೋಗ, ಅರಣ್ಯದ ಹಕ್ಕು, ಭೂಮಿ, ವಸತಿ ಸೇರಿದಂತೆ ಇತರೆ ಮೂಲ ಸೌಕರ್ಯಗಳನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲು ನೀತಿಗಳನ್ನು ರೂಪಿಸಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಜನಾಧಿಕಾರ ಸುರಕ್ಷಾ ಸಮಿತಿಯ ಸುಬ್ರಹ್ಮಣ್ಯಿ, ಮಹಿಳಾ ಸಂಘಟನೆಯ ಮುಖಂಡರುಗಳಾದ ಸೀಮಾ ಜಿ ಎಸ್, ಪುಷ್ಪ ಹಾಗೂ ಆದಿವಾಸಿ ಮುಖಂಡರುಗಳಾದ ದೇವಮ್ಮ, ಶಿರಮ್ಮ, ಮಾರಮ್ಮ, ಮಾಚಮ್ಮ, ಮಲ್ಲಮ್ಮ ಇದ್ದರು.