ಮೈಸೂರು ಜಿಲ್ಲೆಯ ನಂಜನಗೂಡು ಸಮೀಪ ನಡೆದ ಕಾರ್ಯಕ್ರಮವೊಂದರ ವೇಳೆ ನಿನ್ನೆ ಸಿಎಂ ಸಿದ್ದರಾಮಯ್ಯನವರು ‘ಉಡುಪು ಅವರವರ ಇಷ್ಟ. ಹಿಜಾಬ್ ನಿಷೇಧ ವಾಪಸ್ ತಗೋತೇವೆ’ ಎಂದು ಮಹತ್ವದ ಹೇಳಿಕೆ ನೀಡಿದ್ದರು.
ಹಿಜಾಬ್ ನಿಷೇಧ ಹಿಂಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿರುವುದಕ್ಕೆ ಹಿಜಾಬ್ ಪರವಾಗಿ ಕಳೆದ ವರ್ಷ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ನಾಲ್ವರು ವಿದ್ಯಾರ್ಥಿನಿಯರಲ್ಲಿ ಒಬ್ಬರಾದ ತೆಹ್ರೀನ್ ಬೇಗಮ್ ಹರ್ಷ ವ್ಯಕ್ತಪಡಿಸಿದ್ದು, ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ತೆಹ್ರೀನ್ ಬೇಗಮ್, “ಸಾಂವಿಧಾನಿಕ ಮೂಲಭೂತ ಹಕ್ಕಾದ ಶಿರವಸ್ತ್ರ ನಿಷೇಧ ಹಿಂಪಡೆದು ಈ ರಾಜ್ಯದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು. ನಮ್ಮ ಶಿಕ್ಷಣವನ್ನೇ ಮುಂದುವರಿಯದಂತೆ ಮಾಡಿ ಅರ್ಧದಲ್ಲೇ ಮೊಟಕುಗೊಳಿಸುವಂತೆ ಮಾಡಿದಾಗ, ಇಡೀ ಸಮುದಾಯ ಈ ಕುರಿತು ಧ್ವನಿ ಎತ್ತಿತ್ತು. ಯಾವುದೇ ಬದಲಾವಣೆ ಕಾಣದ ಸಂದರ್ಭದಲ್ಲಿ ನಮಗೆ ಇದೊಂದು ಆಶಾಕಿರಣವೇ ಸರಿ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಉಡುಪು ಅವರವರ ಇಷ್ಟ; ಹಿಜಾಬ್ ನಿಷೇಧ ವಾಪಸ್ ತಗೋತೇವೆ: ಸಿಎಂ ಸಿದ್ದರಾಮಯ್ಯ
“ನಾವು ನಮಗೆ ಸಂವಿಧಾನ ಕೊಟ್ಟಿರುವ ಮೂಲಭೂತ ಹಕ್ಕುಗಳನ್ನು ಅನುಭವಿಸುವುದರೊಂದಿಗೆ ಹಲವು ಸಾಧನೆಗಳನ್ನು ಮಾಡಿ ದೇಶದ ಕೀರ್ತಿ ಪತಾಕೆಯನ್ನು ವಿಶ್ವಕ್ಕೆ ತೋರಿಸಲು ಸದಾ ಸಿದ್ದರಿದ್ದೇವೆ. ನನ್ನ ವಸ್ತ್ರ ನನ್ನ ಹಕ್ಕು. ಅದರಲ್ಲಿ ಯಾರಿಗೂ ವಂಚನೆ ಮಾಡುವ ಯಾವುದೇ ಅವಕಾಶ ಇಲ್ಲ ಎಂದು ಸರ್ಕಾರ ತೋರಿಸಿದೆ. ಮುಂದೆ ಕೂಡ ಇಂತಹ ಸಂವಿಧಾನದ ಆಶಯಕ್ಕೆ ಸಾಥ್ ನೀಡುವ ಸರ್ಕಾರ ಅಧಿಕಾರಕ್ಕೆ ಬಂದು ನಮ್ಮೆಲ್ಲ ಹೆಣ್ಣು ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿದು ಎಲ್ಲರಿಗೂ ಶಿಕ್ಷಣದ ಮುಖಾಂತರ ಬದಲಾವಣೆ ತರಲು ಅವಕಾಶ ಮಾಡಿ ಕೊಡಬೇಕೆಂಬುದು ನಮ್ಮ ಆಶಯ” ಎಂದು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟಿನಲ್ಲಿ ಹಿಜಾಬ್ ಹಕ್ಕಿಗಾಗಿ ಹೋರಾಡಿದ ಮತ್ತು ನಿಷೇಧದಿಂದಾಗಿ ಶಿಕ್ಷಣ ಮೊಟಕು ಗೊಳಿಸಬೇಕಾದ ಅನಿವಾರ್ಯತೆ ಕಂಡ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ತೆಹ್ರೀನ್ ಬೇಗಮ್ ಹರ್ಷ ವ್ಯಕ್ತಪಡಿಸಿದ್ದಾರೆ.
Karnataka CM Siddaramaiah withdraws Hijab ban!
“Will withdraw hijab ban. Women can wear hijab & go. I have directed officers to withdraw the ban order. Choice of dress & food is personal. Why should I obstruct? Wear what you want. Eat what you want. I wear dhoti, you… pic.twitter.com/RR8UFejVsF
— Nabila Jamal (@nabilajamal_) December 22, 2023
ಬಿಜೆಪಿ ಸರಕಾರ ಕಳೆದ ವರ್ಷ ಸರಕಾರಿ ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸುವ ಮೂಲಕ ಹಿಜಾಬ್ ಧರಿಸುವುದಕ್ಕೆ ನಿರ್ಬಂಧ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಕೆಲ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ತೀರ್ಪು ನೀಡಿದ್ದ ಹೈಕೋರ್ಟ್, ಹಿಜಾಬ್ ಅಗತ್ಯ ಇಸ್ಲಾಮಿಕ್ ಧಾರ್ಮಿಕ ಆಚರಣೆಯ ಭಾಗವಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಶಿರವಸ್ತ್ರವನ್ನು ಧರಿಸುವುದರ ಮೇಲಿನ ಬಿಜೆಪಿ ಸರ್ಕಾರ ಹೇರಿದ್ದ ನಿಷೇಧವನ್ನು ಎತ್ತಿ ಹಿಡಿದಿತ್ತು. ಹೈಕೋರ್ಟ್ನ ತೀರ್ಪನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ಇದರ ವಿಚಾರಣೆ ಇನ್ನೂ ನಡೆಯುತ್ತಲೇ ಇದೆ.
ಇದರ ಮಧ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದು, ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಆಡಳಿತಾರೂಢ ಪಕ್ಷವಾಗಿದ್ದ ಬಿಜೆಪಿಯ ಸೋಲಿನಲ್ಲಿ ಹಿಜಾಬ್ ವಿವಾದ ಕೂಡ ದೊಡ್ಡ ಕೊಡುಗೆ ನೀಡಿದೆ ಎಂಬುದನ್ನು ಇಲ್ಲಿ ನಾವು ಸ್ಮರಿಸಬಹುದು.
ಹೈಕೋರ್ಟ್ ನೀಡಿದ್ದ ತೀರ್ಪಿನಿಂದಾಗಿ ಸಾವಿರಾರು ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದಾರೆ ಎಂದು ಕೆಲವು ತಿಂಗಳುಗಳ ಹಿಂದೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL) ಎಂಬ ಸಂಸ್ಥೆ ಬಿಡುಗಡೆಗೊಳಿಸಿದ್ದ ವರದಿಯಲ್ಲಿ ಮಾಹಿತಿ ನೀಡಿತ್ತು.