ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ, ಕಡಿತ ಪ್ರಕರಣಗಳನ್ನು ನಿಯಂತ್ರಿಸಲು ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಕಸರತ್ತು ನಡೆಸುತ್ತಲೇ ಇವೆ. ಆದರೂ, ಬೀದಿ ನಾಯಿಗಳ ಅಬ್ಬರವಂತೂ ಕಡಿಮೆಯಾಗಿಲ್ಲ. ಬದಲಾಗಿ, ನಾಯಿ ಕಡಿತದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆರೋಗ್ಯ ಇಲಾಖೆ ನಾಯಿ ಕಡಿತದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದೆ.
2023ರ ಜನವರಿ 1ರಿಂದ ನವೆಂಬರ್ ಅಂತ್ಯದವರೆಗೆ 2,15,403 ಲಕ್ಷ ಮಂದಿ ನಾಯಿ ಕಡಿತಕ್ಕೆ ತುತ್ತಾಗಿದ್ದಾರೆ. ಅವರಲ್ಲಿ ಸುಮಾರು ಶೇ.10ರಷ್ಟು ಮಂದಿ ನಾಕು ನಾಯಿಗಳ ಕಿಡಿತದಿಂದ ಗಾಯಗೊಂಡಿದ್ದಾರೆ ಎಂದು ಇಲಾಖೆಯ ವರದಿ ಹೇಳಿದೆ. ಈ ಅಂಕಿಅಂಶಗಳ ಪ್ರಕಾರ ದಿನಕ್ಕೆ ಸರಾಸರಿ 700 ಮಂದಿ ನಾಯಿ ಕಡಿತಕ್ಕೆ ತುತ್ತಾಗಿದ್ದಾರೆ.
ಬೆಂಗಳೂರಿನಲ್ಲಿಯೇ 15,000 ಮಂದಿಗೆ ನಾಯಿಗಳ ಕಡಿದಿವೆ. ಇನ್ನು ದಕ್ಷಣ ಕನ್ನಡ ಜಿಲ್ಲೆಯಲ್ಲಿ 11,500 ಪ್ರಕರಣಗಳು ದಾಖಲಾಗಿದ್ದು, ಎರಡನೇ ಸ್ಥಾನದಲ್ಲಿದೆ. ಉಡುಪಿ 11,000, ಚಿತ್ರದುರ್ಗ 10,000 ಹಾಗೂ ಧಾರವಾಡದಲ್ಲಿ 6,000 ಪ್ರಕರಣಗಳು ದಾಖಲಾಗಿದ್ದು, ನಂತರದ ಸ್ಥಾನಗಳಲ್ಲಿವೆ.
“ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಆ್ಯಂಟಿ ರೇಬಿಸ್ ಲಸಿಕೆ ನೀಡಲಾಗುತ್ತಿದೆ. ಇದುವರೆಗೆ ನಗರದಲ್ಲಿ 4 ರೇಬಿಸ್ ಪ್ರಕರಣಗಳು ವರದಿಯಾಗಿವೆ. ನಾಯಿ ಕಡಿತಕ್ಕೆ ತುತ್ತಾದವರಿಗೆ ‘ಆ್ಯಂಟಿ ರೇಬಿಸ್ ಲಸಿಕೆ’ ಮತ್ತು ‘ರೇಬಿಸ್ ಇಮ್ಯುನೋಗ್ಲಾಬ್ಯುಲಿನ್’ ಚುಚ್ಚುಮದ್ದನ್ನು ಉಚಿತವಾಗಿ ನೀಡಲಾಗುತ್ತಿದೆ” ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಜಂಟಿ ಆಯುಕ್ತ ಡಾ. ರವಿಕುಮಾರ್ ತಿಳಿಸಿದ್ದಾರೆ.
2021ರಲ್ಲಿ ಸುಮಾರು 1.59 ಲಕ್ಷ ನಾಯಿ ಕಡಿತದ ಪ್ರಕರಣಗಳು ದಾಖಲಾಗಿದ್ದವು. 2022ರಲ್ಲಿ ಸುಮಾರು 1.62 ಲಕ್ಷ ಮಂದಿ ನಾಯಿ ಕಡಿತಕ್ಕೆ ತುತ್ತಾಗಿದ್ದರು. ಈ ವರ್ಷ, ನಾಯಿ ಕಡಿತದ ಪ್ರಕರಣಗಳು ಮತ್ತಷ್ಟು ಹೆಚ್ಚಾಗಿದೆ.