ಇತ್ತೀಚೆಗಷ್ಟೆ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಸಂಸದ ಬ್ರಿಜ್ ಭೂಷಣ್ ಸಿಂಗ್ ಬಣದ ಸಂಜಯ್ ಸಿಂಗ್ ನೇತೃತ್ವದ ಭಾರತೀಯ ಕುಸ್ತಿ ಒಕ್ಕೂಟವನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದೆ.
ಡಿಸೆಂಬರ್ 24ರಂದು ಪ್ರಕಟಿಸಿದ ನಿರ್ಧಾರದಲ್ಲಿ ಕೇಂದ್ರ ಕ್ರೀಡಾ ಸಚಿವಾಲಯವು, ವಿಶ್ವ ಕುಸ್ತಿ ಒಕ್ಕೂಟದ ನಿಯಮ ಮತ್ತು ನಿಬಂಧನೆಗಳನ್ನು ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಭಾರತೀಯ ಕುಸ್ತಿ ಒಕ್ಕೂಟವನ್ನು ಅಮಾನತುಗೊಳಿಸಿರುವುದಾಗಿ ಉಲ್ಲೇಖಿಸಿದೆ.
ಕೇಂದ್ರ ಕ್ರೀಡಾ ಸಚಿವಾಲಯ ಹೊರಡಿಸಿರುವ ಅಧಿಕೃತ ಪ್ರಕಟಣೆಯಲ್ಲಿ, ರಾಷ್ಟ್ರೀಯ ಸ್ಪರ್ಧೆಗಳ ಘೋಷಣೆಗಳು ತರಾತುರಿಯಲ್ಲಿದ್ದವು ಹಾಗೂ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಲಿಲ್ಲ ಎಂದು ತಿಳಿಸಿದೆ.
ಸಂಜಯ್ ಸಿಂಗ್ ನೇತೃತ್ವದಲ್ಲಿ ಹೊಸದಾಗಿ ರಚನೆಯಾದ ಭಾರತೀಯ ಕುಸ್ತಿ ಒಕ್ಕೂಟವು ಡಿ.21 ರಂದು ರಾಷ್ಟ್ರೀಯ ಕಿರಿಯ ಸ್ಪರ್ಧೆಗಳನ್ನು ಈ ವರ್ಷದ ಕೊನೆಯಲ್ಲಿ ಆರಂಭಿಸುವುದಾಗಿ ತಿಳಿಸಿತ್ತು. ಆದರೆ ಕುಸ್ತಿಪಟುಗಳು ಸ್ಪರ್ಧೆಗೆ ತಯಾರಾಗಲು ಕನಿಷ್ಠ 15 ದಿನಗಳ ಸೂಚನೆಯನ್ನು ನೀಡಬೇಕು. ಇದು ವಿಶ್ವ ಕುಸ್ತಿ ಒಕ್ಕೂಟದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ವಾಧಿಕಾರದ ಸಾಂಸ್ಥೀಕರಣದತ್ತ ಭಾರತ, ಇನ್ನೊಂದು ಗುಲಾಮಗಿರಿಯತ್ತ ದೇಶ
“ಅಂತಹ ನಿರ್ಧಾರಗಳನ್ನು ಕಾರ್ಯಕಾರಿ ಸಮಿತಿಯು ತೆಗೆದುಕೊಳ್ಳಬೇಕು. ಅದಕ್ಕೂ ಮೊದಲು ಕಾರ್ಯಸೂಚಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ವಿಶ್ವ ಕುಸ್ತಿ ಒಕ್ಕೂಟದ ಸಂವಿಧಾನದ 11ನೇ ನಿಯಮದ ಪ್ರಕಾರ ‘ನೋಟಿಸ್‌ಗಳು ಮತ್ತು ಸಭೆಗಳಿಗೆ ಕೋರಂ’ ವಿಧಿಸುವ, ಕಾರ್ಯಾಕಾರಿ ಸಮಿತಿಗಾಗಿ ಕನಿಷ್ಠ ಸೂಚನೆ ಅವಧಿಯು 15 ಸ್ಪಷ್ಟ ದಿನಗಳು ಮತ್ತು ಕೋರಂ ಪ್ರತಿನಿಧಿಗಳ 1/3 ಭಾಗವಾಗಿರಬೇಕು. ತುರ್ತು ಕಾರ್ಯಾಕಾರಿ ಸಮಿತಿ ಸಭೆ ಕೈಗೊಳ್ಳಲು ಕನಿಷ್ಠ ಸೂಚನೆ ಅವಧಿಯು 7 ಸ್ಪಷ್ಟ ದಿನಗಳು ಇರಬೇಕು ಮತ್ತು 1/3 ರಷ್ಟು ಪ್ರತಿನಿಧಿಗಳ ಕೋರಂ ಅಗತ್ಯತೆ ಇದೆ”ಎಂದು ಸಚಿವಾಲಯ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ಸಂಸ್ಥೆಯು ಹಿಂದಿನ ಪದಾಧಿಕಾರಿಗಳ ಮೇಲೆ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿದವರ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರುವಂತೆ ತೋರುತ್ತಿದೆ ಎಂದು ಸಚಿವಾಲಯ ಆರೋಪಿಸಿದೆ.
“ಹೊಸದಾಗಿ ಆಯ್ಕೆಯಾಗಿರುವ ಚುನಾಯಿತ ಸಂಸ್ಥೆಯು ಕ್ರೀಡಾ ಸಂಹಿತೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಮಾಜಿ ಪದಾಧಿಕಾರಿಗಳ ಸಂಪೂರ್ಣ ನಿಯಂತ್ರಣವನ್ನು ತೋರುತ್ತಿದೆ” ಎಂದು ಸಚಿವಾಲಯ ಹೇಳಿದೆ.
“ಒಕ್ಕೂಟದ ವ್ಯವಹಾರವನ್ನು ಮಾಜಿ ಪದಾಧಿಕಾರಿಗಳು ನಿಯಂತ್ರಿಸುವ ತಂಡದಿಂದ ನಡೆಸಲಾಗುತ್ತಿದೆ. ಇದು ಆಟಗಾರರ ಮೇಲೆ ಲೈಂಗಿಕ ಕಿರುಕುಳದ ಆರೋಪದ ತಂಡವಾಗಿರುವುದು ಮತ್ತು ನ್ಯಾಯಾಲಯವು ಈ ಪ್ರಕರಣವನ್ನು ವಿಚಾರಣೆ ನಡೆಸುತ್ತಿದೆ” ಎಂದು ಅದು ಮತ್ತಷ್ಟು ಸೇರಿಸಿದೆ.