- ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಬೆಂಬಲಿತ ಅಭ್ಯರ್ಥಿ ಡಾ. ಕ್ರಾಂತಿಕಿರಣ
- ಸರ್ಕಾರಿ ದಾಖಲೆಯಲ್ಲಿ ಒಕ್ಕಲಿಗ, ಟಿಕೆಟ್ ಕೊಟ್ಟಿರುವುದು ಮೀಸಲು ಕ್ಷೇತ್ರಕ್ಕೆ
ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಐದು ಕ್ಷೇತ್ರದ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ಘೋಷಿಸಲಾಗಿದ್ದು, ಹುಬ್ಬಳಿ-ಧಾರವಾಡ ಪೂರ್ವ ಎಸ್ಸಿ ಮೀಸಲು ಕ್ಷೇತ್ರಕ್ಕೆ ನರರೋಗ ತಜ್ಞ ಡಾ. ಕ್ರಾಂತಿ ಕಿರಣ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಆದರೆ, ಡಾ. ಕ್ರಾಂತಿಕಿರಣ ಅವರ ಜಾತಿ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ದಾಖಲೆಯೊಂದು ಗೊಂದಲ ಸೃಷ್ಟಿಸಿದೆ.
ಹುಬ್ಬಳಿ-ಧಾರವಾಡ ಪೂರ್ವ ಎಸ್ಸಿ ಮೀಸಲು ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷ ಒಕ್ಕಲಿಗ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿತಾ? ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಡಾ. ಕ್ರಾಂತಿಕಿರಣ ಅವರ ಸರ್ಕಾರಿ ನೌಕರಿ ಮಾಹಿತಿ ಕುರಿತು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ನಿರ್ದೇಶಕರು ಸಹಿ ಮಾಡಿರುವ ದಾಖಲೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಡಾ. ಕ್ರಾಂತಿಕಿರಣ ಅವರ ಜಾತಿ ʼಒಕ್ಕಲಿಗʼ ಎಂದು ನಮೂದಾಗಿದೆ. ಇವರಿಗೆ ಟಿಕೆಟ್ ಕೊಡಿಸುವಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಸಕ್ತಿ ವಹಿಸಿದ್ದರು ಎನ್ನುವುದು ಕೂಡ ಚರ್ಚೆಯಾಗುತ್ತಿದೆ.
ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡುವುದು ಜನಪ್ರತಿನಿಧಿ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗಿದ್ದು, ಡಾ. ಕ್ರಾಂತಿ ಕಿರಣ ಅವರು ಒಕ್ಕಲಿಗರಾಗಿದ್ದುಕೊಂಡು ಅವರು ಹೇಗೆ ಎಸ್ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ.
ಜಾತಿ ದಾಖಲಾತಿ ಗೊಂದಲ ವಿಚಾರವಾಗಿ ಡಾ. ಕ್ರಾಂತಿಕಿರಣ ಅವರನ್ನು ಈ ದಿನ. ಕಾಮ್, “ನಾನು ಪರಿಶಿಷ್ಟ ಜಾತಿಗೆ ಸೇರಿದ್ದೇನೆ. ನನ್ನ ಜಾತಿ ಬಗ್ಗೆ ನನಗೆ ಯಾವುದೇ ಗೊಂದಲಗಳು ಇಲ್ಲ. ಇಂತಹದೊಂದು ನಕಲಿ ದಾಖಲಾತಿ ಹೇಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂಬುದು ನನಗೆ ಆಶ್ಚರ್ಯವಾಗಿದೆ. ನನ್ನ ಜಾತಿಯ ಬಗ್ಗೆ ಅನುಮಾನ ಇದ್ದವರು ಸರ್ಕಾರಿ ದಾಖಲಾತಿಗಳನ್ನು ಪರಿಶೀಲಿಸಬಹುದು” ಎಂದು ಸ್ಪಷ್ಟಪಡಿಸಿದರು.
ಹುಬ್ಬಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಗ್ಗೆ ಮಾತನಾಡುವುದಾದರೆ, ಛಲವಾದಿ ಸಮುದಾಯಕ್ಕೆ ಸೇರಿದ ಪ್ರಸಾದ ಅಬ್ಬಯ್ಯ 2013 ಮತ್ತು 2018ರಲ್ಲಿ ಕಾಂಗ್ರೆಸ್ನಿಂದ ಗೆದ್ದು ಶಾಸಕರಾಗಿದ್ದಾರೆ. 2008ರಲ್ಲಿ ಬಿಜೆಪಿಯ ವೀರಭದ್ರಪ್ಪ ಹಾಲಹರವಿ (ಮಾದಿಗ ಜನಾಂಗ) ಅವರು ಗೆದ್ದು ಶಾಸಕರಾಗಿದ್ದರು. 2018ರಲ್ಲಿ ಬಿಜೆಪಿಯಿಂದ ಚಂದ್ರಶೇಖರ ಗೋಕಾಕ್ ಸ್ಪರ್ಧಿಸಿ ಸೋಲು ಕಂಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ| 2023ರ ಐಟಿ ನಿಯಮಗಳು- ಅಭಿವ್ಯಕ್ತಿ ಸ್ವಾತಂತ್ರ್ಯ ಹಣಿಯುವ ಮತ್ತೊಂದು ಹುನ್ನಾರ?
ಮಾಜಿ ಸಿಎಂ ಜಗದೀಶ ಶೆಟ್ಟರ್ ಪ್ರತಿನಿಧಿಸುವ ಸೆಂಟ್ರಲ್ ಹಾಗೂ ಕಲಘಟಗಿ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಬಾಕಿ ಉಳಿಸಿಕೊಳ್ಳಲಾಗಿದೆ. ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಕಾಂಗ್ರೆಸ್ ಶಾಸಕರು ಇರುವ ಕುಂದಗೋಳ ಹಾಗೂ ಹುಬ್ಬಳಿ, ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಹುಬ್ಬಳಿ-ಧಾರವಾಡ ಸೆಂಟ್ರಲ್ ಹಾಗೂ ಕಲಘಟಗಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇದ್ದಾಗಲೂ ಆ ಎರಡೂ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಸೆಸ್ಪೆನ್ಸ್ ಇಡಲಾಗಿದೆ.
ಹುಬ್ಬಳಿ, ಧಾರವಾಡ ಪಶ್ಚಿಮ ಕ್ಷೇತ್ರಕ್ಕೆ ಬಿಜೆಪಿ ಹಾಲಿ ಶಾಸಕ ಅರವಿಂದ ಬೆಲ್ಲದ, ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಹಾಲಿ ಶಾಸಕ ಅಮೃತ ದೇಸಾಯಿ ಹಾಗೂ ನವಲಗುಂದ ಕ್ಷೇತ್ರಕ್ಕೆ ಹಾಲಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಕುಂದಗೋಳ ಕ್ಷೇತ್ರಕ್ಕೆ ಎಂ.ಆರ್.ಪಾಟೀಲ ಅವರ ಹೆಸರು ಅಂತಿಮಗೊಳಿಸಲಾಗಿದೆ.