ಪಾಶ್ಚಿಮಾತ್ಯ ದೇಶಗಳಲ್ಲಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಯೇಸು ಕ್ರಿಸ್ತನ ಜನ್ಮದಿನವನ್ನು ಸ್ಮರಿಸುವ ಸಲುವಾಗಿ ಪ್ರಪಂಚದಾದ್ಯಂತ ಕ್ರಿಶ್ಚಿಯನ್ನರು ಕ್ರಿಸ್‌ಮಸ್ ದಿನವನ್ನು ಆಚರಿಸುತ್ತಾರೆ. ಈ ಹಬ್ಬವನ್ನು ಕೇವಲ ಕ್ರಿಶ್ಚಿಯನ್ನರು ಮಾತ್ರವಲ್ಲದೇ ಇತರ ಧರ್ಮದವರು ಕೂಡ ವಿಜೃಂಭಣೆಯಿಂದ ಆಚರಿಸುತ್ತಾರೆ. ಸುಂದರವಾದ ಕ್ರಿಸ್‌ಮಸ್ ಟ್ರೀ, ಬಣ್ಣ ಬಣ್ಣದ ಆಲಂಕಾರಿಕ ವಸ್ತುಗಳು, ಉಡುಗೂರೆಗಳು ಎಲ್ಲರ ಕಣ್ಮನ ಸೆಳೆಯುತ್ತವೆ.
ಅದೇ ರೀತಿ ನಮ್ಮ ಬೆಂಗಳೂರಿನಲ್ಲಿಯೂ ಕೂಡ ಕ್ರಿಸ್‌ಮಸ್ ಹಬ್ಬ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಈಗಾಗಲೇ, ನಗರದಲ್ಲಿರುವ ಚರ್ಚ್‌ಗಳಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ನಗರದ ಎಲ್ಲ ಚರ್ಚ್‌ಗಳಲ್ಲಿ ಕ್ರೈಸ್ತ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆ, ಬೆಂಗಳೂರು ನಗರದಾದ್ಯಂತ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಚರ್ಚ್ ಸುತ್ತಮುತ್ತ ಪೊಲೀಸರು ಗಸ್ತು ತಿರುಗುವಂತೆ ಬೆಂಗಳೂರು ನಗರ ಆಯುಕ್ತರು ಸೂಚನೆ ನೀಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಚರ್ಚ್‌ಗಳ ಬಳಿ ಕೆಎಸ್ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
ಬೆಂಗಳೂರಿನಲ್ಲಿರುವ ಜನಪ್ರಿಯ ಚರ್ಚ್‌ಗಳು
ಸೇಂಟ್ ಮೇರಿ ಬೆಸಲಿಕಾ ಅಥವಾ ಸಂತ ಮೇರಿ ಬೆಸಿಲಿಕಾ, ಇನ್ಫೆಂಟ್ ಜೀಸಸ್ ಚರ್ಚ್, ರೋಮನ್ ಕ್ಯಾಥೋಲಿಕ್ ಚರ್ಚ್ ಹಾಗೂ ಹೋಲಿ ಟ್ರಿನಿಟಿ ಚರ್ಚ್ ಬೆಂಗಳೂರಿನಲ್ಲಿರುವ ಜನಪ್ರಿಯ ಚರ್ಚ್‌ಗಳಾಗಿವೆ.
ಬೆಂಗಳೂರಿನ ಶಿವಾಜಿನಗರ ಬಸ್ ನಿಲ್ದಾಣದ ಬದಿಯಲ್ಲಿರುವ ಪ್ರಾಚೀನವಾದ ಸೇಂಟ್ ಮೇರಿ ಬೆಸಿಲಿಕಾ ಅಥವಾ ಸಂತ ಮೇರಿ ಬೆಸಿಲಿಕಾ ಚರ್ಚ್‌ನಲ್ಲಿ ಪ್ರತಿ ವರ್ಷ ಕ್ರಿಸ್‌ಮಸ್ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಚರ್ಚ್‌ಗೆ ಸಾಕಷ್ಟು ಮಂದಿ ಭೇಟಿ ನೀಡುತ್ತಾರೆ.
ಹೋಲಿ ಟ್ರಿನಿಟಿ ಚರ್ಚ್ ಎಂ.ಜಿ ರಸ್ತೆಯ ಪೂರ್ವ ಭಾಗದಲ್ಲಿರುವ ಟ್ರಿನಿಟಿ ವೃತ್ತದಲ್ಲಿ ಇದೆ. ಇದು ಕೂಡ ಬೆಂಗಳೂರಿನಲ್ಲಿರುವ ಜನಪ್ರಿಯವಾದ ಚರ್ಚ್‌ಗಳಲ್ಲಿ ಒಂದಾಗಿದೆ. ಈ ಚರ್ಚ್ ಅನ್ನು ಇಂಗ್ಲಿಷ್ ನವೋದಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ.60 ಕನ್ನಡ ಕಡ್ಡಾಯ: ಬಿಬಿಎಂಪಿ ಆದೇಶ
ಬೆಂಗಳೂರಿನಲ್ಲಿರುವ ಇನ್ಫೆಂಟ್ ಜೀಸಸ್ ಚರ್ಚ್ ರೋಮನ್ ಕ್ಯಾಥೋಲಿಕ್ ಚರ್ಚ್ ಆಗಿದೆ. ಇದು ಬೆಂಗಳೂರಿನ ವಿವೇಕ್ ನಗರದಲ್ಲಿದ್ದು, ಈ ಸುಂದರವಾದ ಚರ್ಚ್ ಅನ್ನು ಇನ್ಫೆಂಟ್ ಜೀಸಸ್ ಶ್ರೈನ್ ಎಂದೇ ಕರೆಯಲಾಗುತ್ತದೆ.
ಇನ್ನು ಶಿವಾಜಿನಗರದ ಸೇಂಟ್ ಮೇರಿ ಬೆಸಿಲಿಕಾ ಚರ್ಚ್‌ಗೆ ಕ್ರಿಸ್‌ಮಸ್ ಹಬ್ಬದ ದಿನ 20 ಸಾವಿರಕ್ಕೂ ಹೆಚ್ಚು ಜನ ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ, ಚರ್ಚ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದೆ.