ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ಮೇಳ ಜನವರಿ ತಿಂಗಳಲ್ಲಿ ನಡೆಯುತ್ತದೆ. ಅದರ ಭಾಗವಾಗಿ ಜಿಲ್ಲಾ ಮಟ್ಟದಲ್ಲಿಯೂ ಸಿರಿಧಾನ್ಯ ಮೇಳ ನಡೆಸಲಾಗುತ್ತಿದೆ. ಸಿರಿಧಾನ್ಯಗಳ ಕುರಿತು ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್ ಬೋಸರಾಜು ಹೇಳಿದ್ದಾರೆ.
ರಾಯಚೂರಿನಲ್ಲಿ ಸಿರಿಧಾನ್ಯ ಉತ್ಸವದ ಅಂಗವಾಗಿ ಜಿಲ್ಲಾಡಳಿತ ಮತ್ತು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಆಯೋಜಿಸಿದ್ದ ಸಿರಿಧಾನ್ಯಗಳ ಜಾಗೃತಿ ನಡಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. “ಸಿರಿಧಾನ್ಯ ಬೆಳೆ ಮತ್ತು ಬಳಕೆ ಕುರಿತು ರೈತರಿಗೆ ಮತ್ತು ಗ್ರಾಹಕರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ” ಎಂದರು.
ಜಾಗೃತಿ ನಡಿಗೆಯು ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಆರಂಭವಾಗಿ ಬಸವೇಶ್ವರ ವೃತ್ತದ ಮೂಲಕ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ವರೆಗೆ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕರಾಂ ಪಾಂಡ್ವೆ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ದೇವಿಕಾ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಹನುಮಂತಪ್ಪ ಸೇರಿದಂತೆ ಕೃಷಿ ವಿವಿ ಹಾಗೂ ಕೃಷಿ ಇಲಾಖೆ ಸಿಬ್ಬಂಧಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ : ಹಫೀಜುಲ್ಲ