ಜಾತಿಗಣತಿಯು 8 ವರ್ಷಗಳಷ್ಟು ಹಳೆಯದಾಗಿದೆ. ಕಾಂತರಾಜ ಆಯೋಗದ ವರದಿ ಒಪ್ಪಿಕೊಳ್ಳದೇ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನೂ ಒಳಗೊಂಡಂತೆ ವಾಸ್ತವಿಕತೆ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ಹಿಂದುಳಿದಿರುವಿಕೆಯ ಆಧಾರದ ಮೇಲೆ ವೈಜ್ಞಾನಿಕ ಜಾತಿಗಣತಿ ಆಗಬೇಕು ಎಂಬುದೂ ಸೇರಿದಂತೆ ಎಂಟು ನಿರ್ಣಯಗಳನ್ನು ವೀರಶೈವ ಲಿಂಗಾಯತ ಮಹಾಸಭಾ ಅಂಗೀಕರಿಸಿದೆ.
ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನದಲ್ಲಿ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ನಿರ್ಣಯಗಳನ್ನು ಮಂಡಿಸಿದರು. “ದೇಶದ ಅಖಂಡತೆ, ಏಕತೆ, ಸಮಗ್ರತೆ, ಭದ್ರತೆಯ ರಕ್ಷಣೆಗೆ ಮಹಾಸಭೆ ಹಾಗೂ ನಮ್ಮ ಸಮಾಜ ಸದಾ ಕಟಿ ಬದ್ಧವಾಗಿದ್ದು, ಅಂತಹ ಯಾವುದೇ ಹೋರಾಟ, ಪ್ರಯತ್ನಗಳಿಗೆ ಈ ಹಿಂದಿನಂತೆಯೇ ಪ್ರೋತ್ಸಾಹ, ಬೆಂಬಲ ನೀಡುತ್ತದೆ ಎಂದು ಈ ಮಹಾಧಿವೇಶನವು ಪುನರುಚ್ಚರಿಸುತ್ತದೆ” ಎಂದರು.
“ಹನ್ನೆರಡನೇ ಶತಮಾನದಲ್ಲೇ ಅನುಭವ ಮಂಟಪದ ಮೂಲಕ ಸಂಸತ್ತಿನ ಮತ್ತು ಸಮ ಸಮಾಜದ ಪರಿಕಲ್ಪನೆಯನ್ನು ಜಗತ್ತಿಗೆ ಕಟ್ಟಿಕೊಟ್ಟ, ಮಹಾನ್ ಮಾನವತಾವಾದಿ, ಸಾಮಾಜಿಕ ಕ್ರಾಂತಿಯ ಹರಿಕಾರ, ಜಗಜ್ಯೋತಿ ಬಸವೇಶ್ವರರ ಚಿಂತನೆ, ಅನುಭಾವ ಸಾರ್ವಕಾಲಿಕ. ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಬಸವತತ್ವ ಪರಿಪಾಲನೆ ಪರಮಾನ್ನವಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಗುರು ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರೆಂದು ಸರ್ಕಾರ ಅಧಿಕೃತವಾಗಿ ಘೋಷಿಸಬೇಕು” ಎಂದರು.
“ವೀರಶೈವ -ಲಿಂಗಾಯಿತ ಸಮುದಾಯದಲ್ಲಿ ಲಕ್ಷಾಂತರ ಕಡು ಬಡವರಿದ್ದು, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿಯೂ ಅತ್ಯಂತ ಹಿಂದುಳಿದಿದ್ದಾರೆ. ಹೀಗಾಗಿ ವೀರಶೈವ – ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನೂ ಒಳಗೊಂಡಂತೆ ಕೇಂದ್ರ ಸರ್ಕಾರದ ಇತರ ಹಿಂದುಳಿದ ವರ್ಗಗಳ (ಓಬಿಸಿ) ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರವು ಭಾರತ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಮತ್ತು ಕೇಂದ್ರ ಸರ್ಕಾರ ಈ ಶಿಫಾರಸ್ಸನ್ನು ಅಂಗೀಕರಿಸಬೇಕು” ಎಂದು ಹೇಳಿದರು.
“ಪ್ರಸ್ತುತ ಚರ್ಚೆಯ ವಸ್ತುವಾಗಿರುವ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯ ಸಮೀಕ್ಷೆ ಅಂದರೆ ಜಾತಿ ಜನಗಣತಿ ಸುಮಾರು 8 ವರ್ಷಗಳಷ್ಟು ಹಳೆಯದಾಗಿದ್ದು, ಅಧಿಕೃತವಾಗಿ ಅಂಗೀಕಾರವಾಗುವ ಮೊದಲೇ ಅದರಲ್ಲಿನ ಅಂಶಗಳು ಸೋರಿಕೆಯಾಗಿವೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಶ್ರೀ ಕಾಂತರಾಜು ಆಯೋಗದ ವರದಿಯನ್ನು ಸರ್ಕಾರ ಒಪ್ಪಿಕೊಳ್ಳದೆ, ವೀರಶೈವ – ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನೂ ಒಳಗೊಂಡಂತೆ ವಾಸ್ತವಿಕತೆಯ ಮತ್ತು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಯ ಹಿಂದುಳಿದಿರುವಿಕೆಯ ಆಧಾರದ ಮೇಲೆ ವೈಜ್ಞಾನಿಕವಾಗಿ ಜಾತಿ ಜನಗಣತಿ ಆಗಬೇಕು ಎಂದು ಈ ಮಹಾಧಿವೇಶನ ಒಕ್ಕೊರಲಿನಿಂದ ಒತ್ತಾಯಿಸಿದೆ” ಎಂದು ತಿಳಿಸಿದರು.
“ಸಮಾಜದ ಒಳಿತಿಗಾಗಿ ಮತ್ತು ನಮ್ಮ ಸಮುದಾಯದ ನಿಖರ ಜನಸಂಖ್ಯೆಯ ಬಗ್ಗೆ ಜಗತ್ತಿಗೆ ತಿಳಿಸಲು, ಸರ್ಕಾರ ಮುಂದಿನ ದಿನಗಳಲ್ಲಿ ನಡೆಸುವ ಜನ ಗಣತಿಯ ವೇಳೆ ನಮ್ಮ ಸಮಾಜದ ಬಾಂಧವರು ಹಿಂದು ಮತ್ತು ತಮ್ಮ ಉಪ ಜಾತಿಯ ಹೆಸರುಗಳನ್ನು ಬರೆಸದೆ, ಧರ್ಮದ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದೇ ಬರೆಸುವಂತೆ ಈ ಮಹಾಧಿವೇಶನ ಮನವಿ ಮಾಡಲು ನಿರ್ಣಯ ಮಾಡಿದೆ” ಎಂದರು.
ಈ ಸುದ್ದಿ ಓದಿದ್ದೀರಾ?: ವೀರಶೈವ – ಲಿಂಗಾಯತ ಸಮುದಾಯ ಒಗ್ಗೂಡಿಸುವುದು ನಮ್ಮ ಗುರಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್
“ನಮ್ಮ ಸಮುದಾಯದಿಂದ ಪ್ರಥಮ ಮುಖ್ಯಮಂತ್ರಿ ಲಿಂಗೈಕ್ಯ ನಿಜಲಿಂಗಪ್ಪನವರು ನಮ್ಮ ಸಮುದಾಯದ ಹೆಮ್ಮೆ. ಮಹಾಸಭಾ ಸಾಂಕೇತಿಕವಾಗಿ ಈ ಮಹಾ ಅಧಿವೇಶನದ ಮುಖ್ಯ ವೇದಿಕೆಗೆ ಅವರ ಹೆಸರಿಟ್ಟು ಗೌರವ ಸಲ್ಲಿಸಿದೆ. ಶ್ರೀ ನಿಜಲಿಂಗಪ್ಪನವರು ವಾಸವಿದ್ದ ಚಿತ್ರದುರ್ಗದ ಅವರ ನಿವಾಸವನ್ನು ಸರ್ಕಾರ ಖರೀದಿಸಿ, ಸಂರಕ್ಷಿಸಿ, ಅಭಿವೃದ್ಧಿಪಡಿಸಿ ಶ್ರೀ ನಿಜಲಿಂಗಪ್ಪನವರ ಸರಳತೆ, ಉದಾತ್ತ ಚಿಂತನೆ, ದಕ್ಷ ಆಡಳಿತದ ಸಮ್ಯಕ್ ಚಿತ್ರಣವನ್ನು ನಾಡಿನ ಜನತೆಗೆ ಕಟ್ಟಿಕೊಡುವಂತೆ ಅರ್ಥಪೂರ್ಣವಾಗಿ ಶಾಶ್ವತ ಸ್ಮಾರಕ ನಿರ್ಮಾಣ ಮಾಡಲು, ಆ ಮನೆಯನ್ನು ಖರೀದಿಸಿ ಕಾರ್ಯಪ್ರವೃತ್ತವಾಗಿ ಶ್ರೀ ನಿಜಲಿಂಗಪ್ಪನವರ ಪುಣ್ಯ ಸ್ಮರಣೆಯ ದಿನವಾದ ಆಗಸ್ಟ್ 8, 2024ರೊಳಗೆ ಸ್ಮಾರಕ ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂದು ಈ ಮಹಾಧಿವೇಶನ ಒತ್ತಾಯಿಸುತ್ತದೆ” ಎಂದು ಹೇಳಿದರು.
“ಮಹಾಸಭಾದ 24ನೇ ಮಹಾಧಿವೇಶನವನ್ನು ವೈಭವಪೂರ್ಣವಾಗಿ ಮತ್ತು ಅತ್ಯಂತ ವ್ಯವಸ್ಥಿತವಾಗಿ ನೆರವೇರಲು ಮಾರ್ಗದರ್ಶನ ಮಾಡಿದ ಹರ-ಗುರು ಚರಮೂರ್ತಿಗಳಿಗೆ, ಒತ್ತಾಸೆಯಾಗಿ ನಿಂತ ರಾಜಕೀಯ ಮುಖಂಡರುಗಳಿಗೆ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಾವೇರಿ, ಚಿಕ್ಕಮಗಳೂರು, ಮತ್ತು ಶಿವಮೊಗ್ಗ ಜಿಲ್ಲಾ ಘಟಕಗಳ ಜೊತೆಗೆ ಎಲ್ಲ ಹಂತದ ಘಟಕಗಳು ಮತ್ತು ವಿಭಾಗಗಳಿಗೆ, ಗಣ್ಯರಿಗೆ, ದಾನಿಗಳಿಗೆ, ಸಮಾಜದ ಬಂಧುಗಳಿಗೆ, ಪ್ರಚಾರ ನೀಡಿದ ಮಾಧ್ಯಮದವರಿಗೆ ಮತ್ತು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಈ ಮಹಾಧಿವೇಶನ ತನ್ನ ಕೃತಜ್ಞತೆಯನ್ನು ಸಮರ್ಪಿಸುವ ನಿರ್ಣಯ ಅಂಗೀಕರಿಸಿದೆ” ಎಂದರು.