ನಾವು ಸೇವಿಸುವ ಆಹಾರ, ಔಷಧಗಳು ಹಾಗೂ ದಿನನಿತ್ಯ ಬಳಸುವ ಪದಾರ್ಥಗಳು ಕಲಬೆರಕೆಯಿಂದ ಕೂಡಿದ್ದು, ಅವು ನಮ್ಮ ದೇಹವನ್ನು ಸೇರಿ ಅನೇಕ ರೀತಿಯ ಕಾಯಿಲೆಗಳಿಗೆ ಕಾರಣವಾಗುತ್ತಿವೆ ಎಂದು ನಿವೃತ್ತ ಡಿವೈಎಸ್‌ಪಿ ರಂಗಸ್ವಾಮಿ ಹೇಳಿದ್ದಾರೆ.
ಮೈಸೂರಿನಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತಿ ಆಯೋಜಿಸಿದ್ದ ‘ಗ್ರಾಹಕನೇ ರಾಜ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. “ಗ್ರಾಹಕರಿಗೆ ತಾವು ನೀಡಿದ ಹಣದ ಮೌಲ್ಯಕ್ಕೆ ಅನುಗುಣವಾಗಿ ವ್ಯಾಪಾರಸ್ಥರು ಗುಣಮಟ್ಟದ ವಸ್ತುಗಳನ್ನು ನೀಡುತ್ತಿಲ್ಲ. ಲಾಭದ ಆಸೆಯಿಂದ ಉದ್ದೇಶಪೂರ್ವಕವಾಗಿ ಗ್ರಾಹಕರನ್ನು ವಂಚಿಸುವ ದೊಡ್ಡ ದಂಧೆಯೇ ನಡೆಯುತ್ತಿದೆ. ಇದ್ದರಿಂದ ಅಮಾಯಕ ಗ್ರಾಹಕರು ಹೆಚ್ಚು ವಂಚಿತರಾಗುತ್ತಿದ್ದಾರೆ” ಎಂದರು.
“ವಸ್ತುಗಳ ಬೆಲೆಯಲ್ಲಿ ಮತ್ತು ತೂಕದಲ್ಲಿ ವ್ಯತ್ಯಾಸ ಕಂಡು ಬಂದರೆ ಸ್ಥಳೀಯ ಕಾನೂನು ಮಾಪನಶಾಸ್ತ್ರ ಇಲಾಖೆಗೆ ದೂರು ನೀಡಬೇಕು. ತಪಿತಸ್ಥರಿಗೆ ಶಿಕ್ಷೆ ನೀಡುವ ಕೆಲಸವನ್ನು ಪ್ರಜ್ಞಾವಂತ ಗ್ರಾಹಕರು ಮಾಡಬೇಕು. ಇವೆಲ್ಲಕ್ಕಿಂತ ಮುಖ್ಯವಾಗಿ ಗ್ರಾಹಕರ ಹಕ್ಕುಗಳ ಬಗ್ಗೆ ನಾವು ತಿಳಿದುಕೊಂಡು ಮತ್ತೊಬ್ಬರಿಗೂ ತಿಳಿಸಿಕೊಡಬೇಕು” ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಚಂದ್ರಶೇಖರ್, ಪತ್ರಕರ್ತ ಅನಿಲ್ ಕುಮಾರ್, ವಕೀಲ ರವೀಂದ್ರ, ಪ್ರಾಂತ ಕಾರ್ಯಕಾರಣಿಯ ಸದಸ್ಯರಾದ ಡಾ ಜಿ ವಿ ರವಿಶಂಕರ್, ಜೆಪಿ ನಗರದ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಬಸವರಾಜ್, ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಉಪಾಧ್ಯಕ್ಷ ಜಯಕುಮಾರ್, ದೊರೆಸ್ವಾಮಿ ಹಾಗೂ ಇನ್ನಿತರರು ಇದ್ದರು.