ಬಿಕೆ ಹರಿಪ್ರಸಾದ್ ಮಾನಸಿಕ ಸ್ಥಿತಿ ಸರಿ ಇಲ್ಲ. ಹೀಗಾಗಿ ಏನೇನೋ ಮಾತನಾಡುತ್ತಾರೆ. ಈಗ ಅವರು ಕಾಂಗ್ರೆಸ್‌ನಲ್ಲಿ ಲೆಕ್ಕಕ್ಕಿಲ್ಲದ ನಾಯಕ. ಅಲ್ಲಿ ಅವರಿಗೆ ಮಾನಸಿಕ ಹಿಂಸೆ ಅಗುತ್ತಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.
ಬಿಜೆಪಿಯವರು ಗೋಡ್ಸೆ ಅನುಯಾಯಿಗಳು ಎಂಬ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, “ಹರಿಪ್ರಸಾದ್ ಒಬ್ಬ ಹಿರಿಯ ನಾಯಕ. ಆದರೆ ಅವರು ಆ ರೀತಿ ವರ್ತಿಸುತ್ತಿಲ್ಲ. ಅದಕ್ಕೆ ಹೆಚ್ಚು ಬೆಲೆ ಕೊಡುವ ಅಗತ್ಯವಿಲ್ಲ” ಎಂದರು.
“ಈ ರೀತಿ ಮಾತನಾಡಿದರೆ ಹರಿಪ್ರಸಾದ್ ದೊಡ್ಡವರಾಗುವುದಿಲ್ಲ. ಇದು ಅವರ ಹೀನ ಸಂಸ್ಕೃತಿ ತೋರಿಸುತ್ತದೆ. ಕಾಂಗ್ರೆಸ್ ನಲ್ಲಿ ಅವರಿಗೆ ಮಾನಸಿಕ ಹಿಂಸೆ ಆಗಿದೆ. ಹಿಂಸೆ ತಾಳಲಾರದೆ ಈ ರೀತಿಯಾಗಿ ಮಾತಾಡುತ್ತಿದ್ದಾರೆ” ಎಂದು ಕುಟುಕಿದರು.
ಬಿಜೆಪಿಯವರು ಬ್ರಿಟಿಷ್ ಬೂಟ್ ನೆಕ್ಕುವವರು ಎಂಬ ಹೇಳಿಕೆಗೆ ಸಹ ಕಿಡಿಕಾರಿದ ಅವರು, “ನಾಲಿಗೆ ಮೇಲೆ ಹಿಡಿತ ಇರಿಸಿಕೊಂಡು ಮಾತನಾಡಬೇಕು. ಅವರ ಮಾತು ಅವರಿಗೆ ಗೌರವ ತರಲ್ಲ. ಇದರಿಂದ ಅವರ ವ್ಯಕ್ತಿತ್ವ ಬೆಳೆಯಲ್ಲ. ಬೂಟು ನೆಕ್ಕುವುದು ಎಂಬ ಹೇಳಿಕೆ ಸರಿಯಲ್ಲ. ಸಜ್ಜನರಿಗೆ ಆದರ್ಶವಾಗಿರಬೇಕು. ಅವರ ಹೀನ ಸಂಸ್ಕ್ರತಿ ತೋರಿಸುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ವಾಧಿಕಾರದ ಸಾಂಸ್ಥೀಕರಣದತ್ತ ಭಾರತ, ಇನ್ನೊಂದು ಗುಲಾಮಗಿರಿಯತ್ತ ದೇಶ
ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, “ಒಬ್ಬ ಹಿರಿಯರು. ಪಕ್ಷದ ನಾಯಕರು ತೆಗೆದುಕೊಂಡ ತೀರ್ಮಾನಕ್ಕೆ ಗೌರವ ಕೊಡಬೇಕು. ಯುವಕರಿಗೆ ಆದ್ಯತೆ ಕೊಡಬೇಕು ಎಂದು ಮಾಡಿದ್ದಾರೆ. ನಾವು ಎಲ್ಲರೂ ಮಾರ್ಗದರ್ಶನ ಮಾಡಬೇಕು. ನಾನು ಎಲ್ಲ ನಾಯಕರ ಪರವಾಗಿ ಕೇಳಿಕೊಳ್ಳುವೆ. ಕಳೆದ ಚುನಾವಣೆಯಲ್ಲಿ ಸ್ವಲ್ಪ ಪಕ್ಷಕ್ಕೆ ಹಿನ್ನಡೆಯಾಗಿದೆ. ಇದು ಸರಿಯಾಗಬೇಕಾಗಿದೆ” ಎಂದು ತಿಳಿಸಿದರು.
ಮಾಜಿ ಸಚಿವ ವಿ ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ಆಗತಾರೆ ಎಂಬ ವಿಚಾರವಾಗಿ ಮಾತನಾಡಿ, “ವಿ ಸೋಮಣ್ಣ ಕಾಂಗ್ರೆಸ್ ಸೇರುತ್ತಾರೆ ಎಂಬುದು ಊಹಾಪೋಹ ಮಾತ್ರ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದರಲ್ಲಿ ಕೂರಲು ಯಾರೂ ಬಯಸುವುದಿಲ್ಲ. ದೇಶದಲ್ಲಿ ಪಂಚರಾಜ್ಯಗಳ ಚುನಾವಣೆ ಬಳಿಕ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ” ಎಂದರು.