ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನನಿತ್ಯದ ವಾಹನ ಸಂಚಾರ ದಟ್ಟಣೆಗೆ ನಗರದ ಜನರು ಹೈರಾಣಾಗಿದ್ದಾರೆ. ಈ ನಡುವೆ ಕ್ರಿಸ್‌ಮಸ್ ಹಬ್ಬದ ಹಿನ್ನೆಲೆ, ಯಲಹಂಕ ಬಳಿಯ ಏಷ್ಯಾದ ಫೀನಿಕ್ಸ್ ಮಾಲ್ ಮುಂದೆ 100 ಅಡಿ ಎತ್ತರದ ಕ್ರಿಸ್‌ಮಸ್ ಟ್ರೀ ಆಕರ್ಷಣೀಯವಾಗಿದ್ದು, ಇದನ್ನು ನೋಡಲು ಮಾಲ್‌ಗೆ ಜನಸಾಗರವೇ ಹರಿದು ಬರುತ್ತಿದೆ. ಮೊದಲೇ ಸದಾ ವಾಹನ ದಟ್ಟಣೆಯಿಂದ ತುಂಬಿರುವ ಈ ಬಳ್ಳಾರಿ ರಸ್ತೆಯಲ್ಲಿ ಇದೀಗ, ಇನ್ನಷ್ಟು ಟ್ರಾಫಿಕ್ ಉಂಟಾಗಿತ್ತು.
ಬೆಂಗಳೂರಿನ ಬ್ಯಾಟರಾಯನಪುರ ಅಪಾರ್ಟ್‌ಮೆಂಟ್ ನಿವಾಸಿಗಳು ಮಾಲ್ ಆಫ್ ಏಷ್ಯಾಗೆ ಬರೋ ಜನರಿಂದ ಟ್ರಾಫಿಕ್ ಮತ್ತಷ್ಟು ಹೆಚ್ಚಾಗ್ತಿದ್ದು, ಇದರಿಂದ ನಿವಾಸಿಗಳು ಬೇಸತ್ತುಹೋಗಿದ್ದಾರೆ. ಅವೈಜ್ಞಾನಿಕವಾಗಿ ಮಾಲ್ ಕಟ್ಟಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಜನರು ಆರೋಪಿಸಿದ್ದಾರೆ.
ಬೆಂಗಳೂರಿನ ಉತ್ತರ ಭಾಗದ ಕೊಡಿಗೇಹಳ್ಳಿ ಬಳಿಯ ಫೀನಿಕ್ಸ್ ಮಾಲ್ ಆಫ್ ಏಷ್ಯಾದವರೆಗೆ ಸಾಗುವ ಬಳ್ಳಾರಿ ರಸ್ತೆ ಸರ್ವೀಸ್ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು, ಸಂಚಾರ ಪೊಲೀಸರು ಕೊಡಿಗೇಹಳ್ಳಿ ಜಂಕ್ಷನ್‌ನಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿದ್ದರು. ಇದರಿಂದ ಸ್ವಲ್ಪ ಸಮಯದ ಬಳಿಕ ನಿಧಾನಗತಿಯಲ್ಲಿ ವಾಹನಗಳು ಸಂಚರಿಸಲು ಪ್ರಾರಂಭಿಸಿದವು.
ಸೋಮವಾರ ಬೆಳಗ್ಗೆ 11 ಗಂಟೆಯಿಂದಲೇ ಕೊಡಿಗೇಹಳ್ಳಿ ಸಿಗ್ನಲ್‌ನಲ್ಲಿ ಸಂಚಾರ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ, ಸಂಚಾರ ದಟ್ಟಣೆಯನ್ನು ಪ್ರತ್ಯೇಕಿಸಲು ಸೂಚನಾ ಫಲಕಗಳನ್ನು ಹಾಕಿದ್ದರು. ಮಾಲ್ ಮತ್ತು ಮಾಲ್ ಸುತ್ತಮುತ್ತಲಿನ ಜನವಸತಿ ಪ್ರದೇಶಗಳ ಕಡೆಗೆ ಹೋಗುವ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಮುಂದುವರಿಯುವಂತೆ ಸೂಚಿಸಲಾಗಿತ್ತು. ವಿಮಾನ ನಿಲ್ದಾಣ, ದೊಡ್ಡಬಳ್ಳಾಪುರ ಮತ್ತು ಇತರ ಪ್ರದೇಶಗಳಿಗೆ ಹೋಗುವ ವಾಹನಗಳು ಮುಖ್ಯ ರಸ್ತೆಯಲ್ಲಿ ಹೋಗುವಂತೆ ತಿಳಿಸಲಾಗಿತ್ತು.
ವಾರಾಂತ್ಯದಲ್ಲಿ ರಸ್ತೆಯಲ್ಲಿ ವಾಹನಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳದ ಜೊತೆಗೆ, ಮಾಲ್ ಆವರಣದಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶದ ಕೊರತೆ, ಆಟೋ ರಿಕ್ಷಾಗಳು, ಟ್ಯಾಕ್ಸಿಗಳು ಮತ್ತು ವೈಯಕ್ತಿಕ ವಾಹನಗಳ ರಸ್ತೆ ಬದಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡಲಾಗಿತ್ತು. ಇದರಿಂದ ಹೆಚ್ಚಿನ ವಾಹನ ಸಂಚಾರ ದಟ್ಟಣೆ ಉಂಟಾಗಲು ಕಾರಣವಾಗಿತ್ತು ಎಂದು ಸಂಚಾರ ಪೊಲೀಸ್ ಮೂಲಗಳು ತಿಳಿಸಿವೆ.
ಈ ಮಾಲ್ ಅನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಮಾಲ್‌ಗೆ ಬರುವವರು ಒಳಗೆ ಹೋಗಲು ₹200 ಟಿಕೆಟ್ ಮಾಡಿ ಸುಲಿಗೆ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗಾಂಜಾ ಇಡುತ್ತೇನೆ ಎಂದು ಹೆದರಿಸಿ ದಂಪತಿಯಿಂದ ₹150 ಲಕ್ಷ ಹಣ ವಸೂಲಿ ಮಾಡಿದ ನಕಲಿ ಪೊಲೀಸ್
ಈ ಬಗ್ಗೆ ಹಲವು ಜನ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, “ಆಸ್ಟರ್ ಆಸ್ಪತ್ರೆಯಿಂದ ಮಾಲ್ ಆಫ್ ಏಷ್ಯಾ ದಾಟಲು 2 ಗಂಟೆ ಸಮಯಾವಕಾಶ ಬೇಕಾಯಿತು. ಅಮೃತಹಳ್ಳಿ ಸಿಗ್ನಲ್ನಲ್ಲಿ ಸರ್ವಿಸ್ ರಸ್ತೆ ಸಂಪರ್ಕಕ್ಕೆ ಮುಖ್ಯ ರಸ್ತೆಯ ಕಾರಣದ ಪ್ರಮುಖ ಸಮಸ್ಯೆಯನ್ನು ದಯವಿಟ್ಟು ಪರಿಹರಿಸಿ” ಎಂದು ಹೇಳಿದ್ದಾರೆ.
ಇನ್ನು ಮಾಲ್‌ಗೆ ಪ್ರವೇಶಿಸಲು ಒಬ್ಬರಿಗೆ ₹200 ಶುಲ್ಕ ವಿಧಿಸಿದ್ದರೆ, ಕಾರುಗಳಿಗೆ ₹150 ಶುಲ್ಕ ವಿಧಿಸಲಾಗಿದೆ ಎಂದು ಮತ್ತೊಬ್ಬ ಬಳಕೆದಾರರು ಟ್ವೀಟ್ ಮಾಡಿದ್ದಾರೆ.
2023ರ ಅಕ್ಟೋಬರ್ನಲ್ಲಿ 13 ಎಕರೆ ವಿಸ್ತಾರದ ಜಾಗದಲ್ಲಿ ಫೀನಿಕ್ಸ್ ಮಾಲ್ ಆಫ್ ಏಷ್ಯಾ ಅನ್ನು ಪ್ರಾರಂಭ ಮಾಡಲಾಯಿತು. ಡಿಸೆಂಬರ್ 16 ರಂದು 100 ಅಡಿ ಎತ್ತರದ ಕ್ರಿಸ್ಮಸ್ ಟ್ರೀಗಳನ್ನು ಪ್ರದರ್ಶಿಸಿದ ಮಾಲ್, ಡಿಸೆಂಬರ್ 24 ರಂದು ಕ್ರಿಸ್ಮಸ್ ಆಚರಣೆಯನ್ನು ಆಯೋಜಿಸಿತ್ತು. ಈ ಹಿನ್ನೆಲೆ, ಮಾಲ್‌ಗೆ ಬರುವವರ ಸಂಖ್ಯೆ ಹೆಚ್ಚಳವಾಗಿತ್ತು.