ಜಾತಿಗಣತಿ ವೇಳೆ ಅರ್ಜಿಯ ಧರ್ಮದ ಕಾಲಂನಲ್ಲಿ ‘ವೀರಶೈವ-ಲಿಂಗಾಯತ’ ಎಂದೂ, ಜಾತಿ ಕಾಲಂನಲ್ಲಿ ‘ಒಳಪಂಗಡಗಳ’ ಹೆಸರನ್ನೂ ಉಲ್ಲೇಖಿಸಬೇಕು ಎಂದು ವೀರಶೈವ-ಲಿಂಗಾಯತ ಮಹಾಸಭಾ ತನ್ನ ಅಧಿವೇಶನದಲ್ಲಿ ನಿರ್ಣಯ ಕೈಗೊಂಡಿದೆ. ಈ ನಿರ್ಣಯದ ಬಗ್ಗೆ ತಮ್ಮ ಬದ್ದತೆ ಏನೆಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವೀರಶೈವ-ಲಿಂಗಾಯತ ಮುದಾಯದ ಬಿಜೆಪಿ ನಾಯಕರು ಸ್ಪಷ್ಟಪಡಿಸಬೇಕು. ಅವರು ಧರ್ಮದ ಕಾಲಂನಲ್ಲಿ ’ವೀರಶೈವ-ಲಿಂಗಾಯತ’ ಎಂದು ಬರೆಸುತ್ತೀರೋ ಅಥವಾ ’ಹಿಂದು’ ಎಂದು ಬರೆಸುತ್ತಿರೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಒತ್ತಾಯಿಸಿದ್ದಾರೆ.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಂಜುನಾಥ್, “ದಾವಣಗೆರೆಯಲ್ಲಿ ನಡೆದ ವೀರಶೈವ-ಲಿಂಗಾಯತ ಮಹಾಸಭಾದ ಅಧಿವೇಶನದಲ್ಲಿ ವೀರಶೈವ ಲಿಂಗಾಯತ ಧರ್ಮ ಮತ್ತು ಒಳಪಂಗಡಗಳ ಜಾತಿ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಅದರಲ್ಲಿ ಯಡಿಯೂರಪ್ಪ ಅವರ ಪಾತ್ರವೂ ಇದೆ. ಆದರೆ, ಅಧಿವೇಶನದಲ್ಲಿ ಮಾತನಾಡಿದ ಯಡಿಯೂರಪ್ಪ ನಿರ್ಣಯದ ಬಗ್ಗೆ ತಮ್ಮ ಬದ್ದತೆಯನ್ನು ಗಟ್ಟಿಯಾಗಿ ಹೇಳುವಲ್ಲಿ ತಡವರಿಸಿದ್ದಾರೆ. ಅಲ್ಲದೆ, ಅವರು ಒಂದೆಡೆ ವೀರಶೈವ ಲಿಂಗಾಯತ ಧರ್ಮವೆಂದು ಹೇಳಿಕೊಳ್ಳುತ್ತಾರೆ. ಬಿಜೆಪಿ ಸಮಾವೇಶಗಳಲ್ಲಿ ನಾವೆಲ್ಲ ಹಿಂದು ಎಂದು ಹೇಳುತ್ತಾರೆ. ಅವರ ದ್ವಂದ್ವ ಹೇಳಿಕೆಗಳು ಜನರಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಅವರು ತಾವು ಯಾವ ಧರ್ಮಕ್ಕೆ ಸೇರಿದವರು ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು” ಎಂದು ಆಗ್ರಹಿಸಿದ್ದಾರೆ.
“ವೀರಶೈವ ಲಿಂಗಾಯತರು ಮತ್ತು ಹಿಂದುಗಳನ್ನು ದ್ವಂದ್ವಕ್ಕೆ ಸಿಲುಕಿಸುವ ಕೆಲಸವನ್ನು ಯಡಿಯೂರಪ್ಪ ಮತ್ತು ಬಿಜೆಪಿಯ ಲಿಂಗಾಯತ ನಾಯಕರು ಮಾಡಬಾರದು. ಧರ್ಮದ ಕಾಲಂನಲ್ಲಿ ’ವೀರಶೈವ-ಲಿಂಗಾಯತ’ ಎಂದು ಬರೆಯಿಸುವ ಬಗ್ಗೆ ವೀರಶೈವ -ಲಿಂಗಾಯತ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಕ್ಕೆ ಅವರು ಬದ್ಧರಾಗಿದ್ದಾರಾ ಎಂಬುದನ್ನು ಹೇಳಬೇಕು” ಎಂದು ಹೇಳಿದ್ದಾರೆ.