ಅರವತ್ತರ ದಶಕದಲ್ಲಿ ಮರಾಠಿ ಲೇಖಕ ಬಾಬುರಾವ್ ಬಾಗುಲ್ ಅವರು ಬರೆದ ಕಥೆಗಳಲ್ಲಿ ಕಾಣುವ ದಲಿತರ ನೋವುಗಳು ಇಂದಿಗೂ ಬದಲಾಗಿಲ್ಲ ಎಂದು ಲೇಖಕಿ ದಯಾ ಗಂಗನಘಟ್ಟ ಹೇಳಿದರು.
ತಮಟೆ ಮೀಡಿಯಾ, ಜಂಗಮ ಕಲೆಕ್ಟಿವ್, ಬೀ ಕಲ್ಚರ್ ವತಿಯಿಂದ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ದು.ಸರಸ್ವತಿಯವರು ಅನುವಾದಿಸಿರುವ ಮರಾಠಿ ದಲಿತ ಲೇಖಕ ಬಾಬುರಾವ್ ಬಾಗುಲ್ ಅವರ ಕತೆಗಳ ಪುಸ್ತಕ ’ಬೀದಿಹೆಣ್ಣು’ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಗುಲ್ ಅವರ ’ನನ್ನ ಜಾತಿ ಮುಚ್ಚಿಟ್ಟಾಗ’ ಕಥೆ ಓದುತ್ತಿದ್ದರೆ, ಅಯ್ಯೋ ಅಂದು ಪರಿಸ್ಥಿತಿ ಹೀಗೆ ಇತ್ತಾ ಎಂದು ಅನಿಸುವುದಕ್ಕಿಂತಲೂ ಈಗಲೂ ಪರಿಸ್ಥಿತಿ ಹಾಗೆಯೇ ಇದೆಯಲ್ಲ ಅನಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಲ ಸುರಿದುಕೊಳ್ಳುವ ಕಥೆಯನ್ನು ಕೇಳಿದ ಮಗ, “ಅಮ್ಮ ಈಗಲೂ ಇಂತಹ ಪರಿಸ್ಥಿತಿ ಇದೆಯಾ?” ಎಂದು ಕೇಳಿದ. ನಿನ್ನೆಮೊನ್ನೆಯಷ್ಟೇ ಶಾಲೆಯ ಮಲದ ಗುಂಡಿಗೆ ಮಕ್ಕಳನ್ನು ಇಳಿಸಿದ್ದ ಘಟನೆಯನ್ನು ವಿವರಿಸಿದೆ ಎಂದರು.
ಬಾಗುಲ್ ಅವರ ಅನುವಾದಿತ ಕೃತಿಯ ಬಗ್ಗೆ ಚರ್ಚೆ ನಡೆಸಲು ನಾವು ಹಿಂದೇಟು ಹಾಕುತ್ತಿದ್ದೇವೆ. ಪ್ರಕಟವಾಗಿ ಒಂದು ವರ್ಷವಾದರೂ ಏಕೆ ಚರ್ಚೆಯನ್ನು ಕೈಗೆತ್ತಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು.
ದಲಿತೇತರರು ಈ ಕತೆಗಳನ್ನು ಓದಬೇಕು. ದಲಿತರ ನೋವುಗಳನ್ನು ಅರ್ಥಮಾಡಿಕೊಳ್ಳಬೇಕು ಎಂದ ಅವರು, ಈ ಕೃತಿಗೆ ‘ಬೀದಿ ಹೆಣ್ಣು’ ಎಂಬುದರ ಬದಲು ‘ನನ್ನ ಜಾತಿ ಮುಚ್ಚಿಟ್ಟಾಗ’ ಎಂಬ ಮೂಲ ಹೆಸರನ್ನೇ ಉಳಿಸಿಕೊಳ್ಳಬಹುದಿತ್ತು ಎಂದು ಸಲಹೆ ನೀಡಿದರು.
ದಲಿತ ಸಾಹಿತ್ಯವು ಅನುಭವ ಕಥನವೇ ಹೊರತು ಸೃಜನಶೀಲವಲ್ಲ ಎನ್ನುವ ಹುನ್ನಾರ ನಡೆಯುತ್ತದೆ. ಇದನ್ನು ಒಡೆಯಬೇಕಿದೆ. ಯಾವುದು ಕಥನ ಮಾದರಿ ಎಂದರೆ ಪುರಾಣ ಪುಣ್ಯ ಕತೆಯನ್ನು ಒಳಗೊಂಡಿದ್ದೇ? ಅನುಭವವನ್ನು ಹೇಳಿವುದು ಕಥನವಲ್ಲವಾ? ಎಂದು ಪ್ರಶ್ನಿಸಿದರು.
ಕಥೆಗಳನ್ನು ಕುರಿತ ಮಾದರಿಯನ್ನು ಮುರಿದು ಕಟ್ಟುವ ಕೆಲಸವನ್ನು ನಾವು ಎಷ್ಟು ಮಾಡುತ್ತಿದ್ದೇವೆ? ನಮ್ಮ ಕತೆಗಳು ರಟ್ಟೆ, ಹೊಟ್ಟೆಗೆ ಸಂಬಂಧಿಸಿವೆ. ಇವು ತಲೆಯಲ್ಲಿ ಹುಟ್ಟಿದ ಕತೆಗಳಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಹೋರಾಟಗಾರ್ತಿ ದು.ಸರಸ್ವತಿ ಮಾತನಾಡಿ, “ಬಾಬುರಾವ್ ಬಾಗುಲ್ ಅವರು ಬೇರೆಯೇ ಸೌಂದರ್ಯಪ್ರಜ್ಞೆಯ ಬಗ್ಗೆ ಮಾತನಾಡುತ್ತಾರೆ. ದಲಿತ ಪ್ಯಾಂಥರ್ಸ್ ಹುಟ್ಟಿಹಾಕಿದವರಲ್ಲಿ ಅವರೂ ಒಬ್ಬರು. ದಲಿತ ಲೇಖಕರಾದ ಕಾರಣ ಬಾಗುಲ್ ನನಗೆ ಮುಖ್ಯವಾಗುತ್ತಾರೆ” ಎಂದು ಹೇಳಿದರು.
ಮಹಾಡ್ ಸತ್ಯಾಗ್ರಹದ ಭಾಗವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟರು. ಸತ್ಯಾಗ್ರಹದ ಕಾರಣಕ್ಕೆ ಗಾಂಧೀಜಿಯರನ್ನು ಮಾತ್ರ ಪರಿಗಣಿಸುತ್ತಾರೆ. ಆದರೆ ಬಾಬಾ ಸಾಹೇಬರು ಕೂಡ ಸತ್ಯಾಗ್ರಹದ ಮಾದರಿ ಕಟ್ಟಿದವರು. ಅಂಬೇಡ್ಕರ್ ಅವರ ಸತ್ಯಾಗ್ರಹವನ್ನೂ ನೆನೆಯಬೇಕು ಎಂದು ಅಭಿಪ್ರಾಯಪಟ್ಟರು.
ಚಿಂತಕರಾದ ರೂಮಿ ಹರೀಶ್ ಮಾತನಾಡಿ, “ಅನುವಾದ ಎಂಬುದು ಕೆಲವೊಮ್ಮೆ ಆಕ್ಟಿಂಗ್ ರೀತಿ. ಕೆಲವರ ಅಭಿನಯದಲ್ಲಿ ಆವಾಹನೆ ಇರುವುದಿಲ್ಲ. ಆದರೆ ಕೆಲವರು ಪಾತ್ರವನ್ನು ಆವಾಹಿಸಿಕೊಂಡು ಅನುವಾದ ಮಾಡುತ್ತಾರೆ. ದು.ಸರಸ್ವತಿಯವರ ಬರಹದಲ್ಲಿ ಆವಾಹನೆ ಕಾಣುತ್ತದೆ” ಎಂದು ಪ್ರಶಂಸಿದರು.
ಲೇಖಕ ದಾದಾಪೀರ್ ಜೈಮನ್ ಮಾತನಾಡಿ, “ಇಲ್ಲಿನ ಕಥೆಗಳು ನಮ್ಮ ಬದುಕಿನೊಂದಿಗೆ ಕನೆಕ್ಟ್ ಆಗುತ್ತವೆ. ಪ್ರತಿ ಕಥೆಯಲ್ಲೂ ಸೂಕ್ಷ್ಮ ವಿವರಗಳನ್ನು ಕಟ್ಟಿಕೊಡಲಾಗಿದೆ” ಎಂದರು.
ಹೋರಾಟಗಾರ್ತಿ ಪ್ರತಿಭಾ ಮಾತನಾಡಿ, “ಬಾಬುರಾವ್ ಬಾಗುಲ್ ರಂತಹ ಮಹಾನ್ ಲೇಖಕರು ನಮಗೆ ಪರಿಚಯವಿರಲಿಲ್ಲ. ಈ ಕೃತಿ ತುಂಬಾ ವಿಶಿಷ್ಟ ಅನಿಸಿತು. ಪಿತೃಪ್ರಧಾನ ವ್ಯವಸ್ಥೆಯ ಮನಸ್ಥಿತಿಯನ್ನು ಸ್ತ್ರೀಪಾತ್ರದ ಮೂಲಕದ ಮೂಲಕ ಕಟ್ಟಿಕೊಡುವ ಕಥೆಗಳು ಇದರಲ್ಲಿವೆ” ಎಂದು ವಿವರಿಸಿದರು.
ಲೇಖಕಿ ಅಶ್ವಿನಿ ಬೋದ್ ಮಾತನಾಡಿ, “1930ರಿಂದ 2008ರವರೆಗೆ ಬದುಕಿದ್ದವರು ಬಾಬುರಾವ್. ಈ ಕತೆಗಳನ್ನು ಬರೆದದ್ದು ಬಹಳ ಹಿಂದೆ. ಇಂದಿಗೂ ಪ್ರಸ್ತುತವಾಗುತ್ತಿವೆ” ಎಂದು ತಿಳಿಸಿದರು.
ಯುವ ವಕೀಲರಾದ ಪೂರ್ವ ಮಾತನಾಡಿ, “ಶೋಷಿತ ಸಮುದಾಯದ ನೋವು ಮತ್ತು ಪ್ರತಿರೋಧದ ದನಿ ಸ್ಪಷ್ಟವಾಗಿ ದಾಖಲಾಗಿದೆ. ಇಲ್ಲಿನ ಕತೆಗಳಲ್ಲಿಅಂಬೇಡ್ಕರ್ ಕಾಣಿಸಿಕೊಳ್ಳುತ್ತಾರೆ” ಎಂದರು.
ಅಂತರಾಷ್ಟ್ರೀಯ ಚಲನಚಿತ್ರ ನಿರ್ದೇಶಕಿ ಜ್ಯೋತಿ ನಿಶಾ ಅವರು ಕೃತಿಯನ್ನು ಬಿಡುಗಡೆ ಮಾಡಿದರು. ಬರಹಗಾರರಾದ ಹುಲಿಕುಂಟೆಮೂರ್ತಿಯವರು ಕಾರ್ಯಕ್ರಮ ನಿರೂಪಿಸಿದರು.