ಬರಗಾಲ, ಬೆಳೆ ನಷ್ಟದಿಂತ ರೈತರು ಕಂಗಾಲಾಗಿದ್ದಾರೆ. ಜೀವನ ನಿರ್ವಹಣೆಯು ದುಸ್ಥರವಾಗಿದೆ. ಸರ್ಕಾರಗಳು ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಲವನ್ನು ಮರುಪಾವತಿಸುವಂತೆ ಕೆಲವು ಬ್ಯಾಂಕ್‌ಗಳು ರೈತರಿಗೆ ನೋಟಿಸ್ ನೀಡಿವೆ. ಬ್ಯಾಂಕ್‌ಗಳ ಧೋರಣೆ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದ್ದು, ಬ್ಯಾಂಕ್‌ಗಳು ಮತ್ತು ಸರ್ಕಾರಗಳ ವಿರುದ್ಧ ರೈತರು ಕಿಡಿಕಾರಿದ್ದಾರೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳು ಸುಮಾರು ರೈತರಿಗೆ ರೈತರಿಗೆ ಸಾಲ ಮರುಪಾವತಿಸುವಂತೆ ನೋಟಿಸ್ ನೀಡಿವೆ. ಬರಗಾಲದ ಸಮಯದಲ್ಲಿ ನೋಟಿಸ್ ನೀಡಿದರೆ, ಬ್ಯಾಂಕ್‌ಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
“ಬ್ಯಾಂಕ್‌ಗಳು ತಾಲೂಕಿನ ಸುಮಾರು 286 ರೈತರಿಗೆ ನೋಟಿಸ್ ನೀಡುತ್ತಿವೆ ಎಂದು ತಿಳಿದುಬಂದಿದೆ. ನೋಟಿಸ್ ನೀಡುವುದನ್ನ ಬ್ಯಾಂಕ್‌ಗಳು ನಿಲ್ಲಿಸಬೇಕು. ನೋಟಿಸ್ ನೀಡದಂತೆ ಬ್ಯಾಂಕ್‌ಗಳಿಗೆ ಸರ್ಕಾರದ ಸೂಚನೆ ನೀಡಬೇಕು. ಇಲ್ಲದಿದ್ದಲ್ಲಿ ಬ್ಯಾಂಕ್‌ಗಳಿಗೆ ಮುತ್ತಿಗೆ ಹಾಕುತ್ತೇವೆ” ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಹೇಳಿದ್ದಾರೆ.
“ಜಿಲ್ಲೆಯಲ್ಲಿ ಸುಮಾರು 4,21,751 ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ. ರಾಜ್ಯ ಸರ್ಕಾರ ಬ್ಯಾಂಕ್‌ಗಳಲ್ಲಿ ಸಾಲ ಮಾಡಿರುವ ರೈತರು ಅಸಲು ಕಟ್ಟಿದರೆ, ಬಡ್ಡಿ ಮನ್ನಾ ಮಾಡುವುದಾಗಿ ಹೇಳಿದೆ. ಆದರೆ, ಬರಗಾಲದಲ್ಲಿ ಅಸಲು ಕಟ್ಟಲು ಹೇಗೆ ಸಾಧ್ಯ” ಅಸಮಾಧಾನ ವ್ಯಕ್ತಪಡಿಸಿದ್ದಾರೆ.