ನೈಜೀರಿಯಾದ ಜನಾಂಗೀಯ ಹಿಂಸೆ ಭುಗಿಲೆದ್ದಿದೆ. ದೇಶದ ಹಲವು ಹಳ್ಳಿಗಳಲ್ಲಿ ಶಸ್ತ್ರಸಜ್ಜಿತ ಗುಂಪುಗಳು ನಡೆಸಿದ ಗುಂಡಿನ ದಾಳಿಯಿಂದ ಒಟ್ಟು 160 ಮಂದಿ ಸಾವನ್ನಪ್ಪಿದ್ದಾರೆ. ಈ ಕುರಿತು ಸ್ಥಳೀಯಾಡಳಿತ ಪ್ರಕಟಣೆ ಹೊರಡಿಸಿದೆ.
ಶಸ್ತ್ರಸಜ್ಜಿತ ಗುಂಪುಗಳು ಕೆಲವು ಬುಡಕಟ್ಟುಗಳಿಗೆ ಸೇರಿದ ಜನರನ್ನು ಗುರಿಯಾಗಿಟ್ಟುಕೊಂಡು ಹಳ್ಳಿಗಳ ಮೇಲೆ ದಾಳಿ ಮಾಡಿ ಗುಂಡಿನ ದಾಳಿ ನಡೆಸಿವೆ.
ಭಾನುವಾರ ನಡೆದಿದ್ದ ಗುಂಡಿನ ದಾಳಿಯಲ್ಲಿ 16 ಜನರು ಸಾವನ್ನಪ್ಪಿದ್ದಾರೆ ಎಂದು ಮೊದಲಿಗೆ ವರದಿಗಳು ಬಂದವು. ಆದರೆ, ಸೋಮವಾರವೂ ಹತ್ಯಾಕಾಂಡ ಮುಂದುವರೆದಿದ್ದು, ಸಾವಿನ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ. 300ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶಗಳಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕಾರಣಗಳಿಂದ ಹಲವು ವರ್ಷಗಳಿಂದ ಘರ್ಷಣೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಶಸ್ತ್ರ ಗುಂಪುಗಳು ಗುಂಡಿನ ದಾಳಿ ನಡೆಸಿವೆ.
ಇಂಥ ಘಟನೆಗಳು ವಾಯವ್ಯ ಹಾಗೂ ಮಧ್ಯ ನೈಜೀರಿಯಾದಲ್ಲಿ ಆಗಾಗ್ಗೆ ಸಂಭವಿಸುತ್ತಿವೆ. ಅರಣ್ಯ ಪ್ರದೇಶಗಳಲ್ಲಿ ನೆಲೆಸಿರುವ ಅಲೆಮಾರಿಗಳ ಕೆಲವು ಶಸ್ತ್ರಸಜ್ಜಿತ ಗುಂಪುಗಳು ಹಳ್ಳಿಗಳ ಮೇಲೆ ದಾಳಿ ಮಾಡಿ ಲೂಟಿ ಮಾಡುತ್ತವೆ. ಸ್ಥಳೀಯರನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಡುತ್ತವೆ. 2009ರಿಂದ ಈಚೆಗೆ ಇಂತಹ ಅನೇಕ ಘಟನೆಗಳು ನಡೆದಿವೆ. ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.