ಶೈಕ್ಷಣಿಕ ಪ್ರವಾಸಕ್ಕೆ ವಿದ್ಯಾರ್ಥಿಗಳು ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಅಪಘಾತಕ್ಕೀಡಾಗಿದ್ದು, 45 ಮಕ್ಕಳಿಗೆ ಗಾಯಗಳಾಗಿರುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಬೇವಿನಹಳ್ಳಿ ಕ್ರಾಸ್ ಬಳಿ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ 45 ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಚಾಲಕ ಸೇರಿ ನಾಲ್ವರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಸಜ್ಜಲಗುಡ್ಡದ ಸರ್ಕಾರಿ ಶಾಲೆಯ 53 ವಿದ್ಯಾರ್ಥಿಗಳು ಮತ್ತು ಆರು ಮಂದಿ ಶಿಕ್ಷಕರು ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದರು. ಸರ್ಕಾರಿ ಬಸ್ ಬುಕ್ ಮಾಡಿಕೊಂಡು ಹೊರಟಿದ್ದ ಅವರು, ಶಿಗ್ಗಾಂವಿ ತಾಲೂಕಿನ ಗೊಟಗೋಡಿಯ ರಾಕ್ ಗಾರ್ಡನ್ ವೀಕ್ಷಿಸಲು ತೆರಳುತ್ತಿದ್ದರು. ಈ ವೇಳೆ, ಬೇವಿನಹಳ್ಳಿ ಕ್ರಾಸ್ ಬಳಿ ಎದುರಿನಿಂದ ವೇಗವಾಗಿ ಕಾರೊಂದು ಬಂದಿದೆ. ಅದಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಬಸ್ ಚಾಲಕ ಯತ್ನಿಸಿದ್ದು, ಬಸ್ ಪಲ್ಟಿಯಾಗಿದೆ ಎಂದು ವರದಿಯಾಗಿದೆ.
ಬಸ್ ಚಾಲಕ ಮಲಪ್ಪ ಹೊಸೂರು ಅವರಿಗೆ ಬೆನ್ನು ಮೂಳೆ ಮರಿದಿದೆ. ಮೂವರು ವಿದ್ಯಾರ್ಥಿಗಳ ಪರಿಸ್ಥಿತಿ ಕೂಡ ಗಂಭೀರವಾಗಿದೆ. ನಾಲ್ವರನ್ನೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.