ʼಕೇಡಿʼ ಸಿನಿಮಾ ಚಿತ್ರೀಕರಣದ ವೇಳೆ ಶೂಟಿಂಗ್‌ಗಾಗಿ ಬಳಸುವ ಸಿಡಿಮದ್ದು ಸ್ಫೋಟಗೊಂಡ ಪರಿಣಾಮ ಬಾಲಿವುಡ್‌ನ ಸ್ಟಾರ್ ನಟ ಸಂಜಯ್ ದತ್ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ʼಕೇಡಿʼ ಚಿತ್ರದಲ್ಲಿ ಸಂಜಯ್ ದತ್ ಖಳನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯ ಬಳಿ ಹಾಕಲಾಗಿರುವ ಬೃಹತ್ ಸೆಟ್‌ನಲ್ಲಿ ಕಳೆದ ಕೆಲ ದಿನಗಳಿಂದ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಸಾಹಸ ನಿರ್ದೇಶಕ ರವಿವರ್ಮ ನೇತೃತ್ವದಲ್ಲಿ ಬುಧವಾರ ಚಿತ್ರದ ಆ್ಯಕ್ಷನ್ ದೃಶ್ಯಗಳು ಮತ್ತು ಬಾಂಬ್ ಸ್ಫೋಟದ ಸನ್ನಿವೇಶಗಳನ್ನು ಸೆರೆ ಹಿಡಿಯುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಸಂಜಯ್ ದತ್ ಅವರ ಮುಖ ಮತ್ತು ಮೊಣಕ್ಕೈ ಭಾಗಕ್ಕೆ ಪೆಟ್ಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಟೈಟಲ್ ಟೀಸರ್ ಮೂಲಕ ಸಿನಿ ರಸಿಕರಲ್ಲಿ ಕುತೂಹಲ ಹೆಚ್ಚಿಸಿದ್ದ ʼಕೇಡಿʼ ಸಿನಿಮಾ ರೌಡಿಸಂ ಕಥಾಹಂದರವನ್ನು ಹೊಂದಿದ್ದು, 70ರ ದಶಕದ ನೈಜ ಘಟನೆಗಳನ್ನು ಆಧರಿಸಿದೆ. ಚಿತ್ರದಲ್ಲಿ ಧ್ರುವ ಸರ್ಜಾ ಕೂಡ ಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್ ಸೇರಿದಂತೆ ಬಾಲಿವುಡ್‌ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ, ಹಿರಿಯ ನಟ ರವಿಚಂದ್ರನ್ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ
ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಸಿದ್ಧಗೊಳ್ಳುತ್ತಿರುವ ಈ ಚಿತ್ರಕ್ಕೆ ʼಕೆವಿಎನ್ ಪ್ರೊಡಕ್ಷನ್ಸ್ʼ ಬಂಡವಾಳ ಹೂಡಿದೆ. ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹೊಣೆ ಹೊತ್ತುಕೊಂಡಿದ್ದಾರೆ.