ಯಾದಗಿರಿಯ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಮೇಲೆ ಅಕ್ರಮ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿ, ಬಾಡಿಗೆ ಕೊಡಲಾಗಿದೆ. ಇದರಿಂದ ಪಾದಚಾರಿಗಳಿಗೆ ತೊಂದರೆ ಉಂಟಾಗಿದೆ. ಕೂಡಲೇ ಈ ಅಕ್ರಮವನ್ನು ತಡೆಯಬೇಕು ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ್ ಕೆ ಮುದ್ನಾಳ್ ಆಗ್ರಹಿಸಿದ್ದಾರೆ.
ಈ ಕುರಿತು ಸ್ಥಳಕ್ಕೆ ಭೇಟಿ ನೀಡಿ ಹೇಳಿಕೆ ನೀಡಿರುವ ಅವರು, “ಈ ಹಿಂದೆ ತಾಲೂಕು ಇದ್ದಾಗ ಯಾವುದೇ ಒಂದು ಪೆಟ್ಟಿಗೆ ಅಂಗಡಿಗಳೂ ಇರಲಿಲ್ಲ. ಜಿಲ್ಲೆಯಾದ ಬಳಿಕ ಶಾಸ್ತ್ರಿ ವೃತ್ತದಿಂದ ಜೆಸ್ಕಾಂ ಇಇ ಕಚೇರಿವರೆಗೆ ಪೋಸ್ಟ್ ಆಫೀಸ್‌ನಿಂದ ಕೋರ್ಟಿನವರೆಗೆ, ಚಿತ್ತಾಪೂರ ರಸ್ತೆಯ ಡಿಗ್ರಿ ಕಾಲೇಜಿನಿಂದ ಆರ್‌ಟಿಒವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಅಕ್ರಮ ಡಬ್ಬಿಗಳು ತಲೆ ಎತ್ತಿವೆ. ಇವುಗಳಿಗೆ ಯಾರು ಪರವಾನಿಗೆ ನೀಡಿದರು ಎಂಬುದನ್ನು ಜಿಲ್ಲಾಡಳಿತ ಹಾಗೂ ನಗರಸಭೆಯವರು ತುರ್ತಾಗಿ ಎರಡು ದಿನಗಳಲ್ಲಿ ಉತ್ತರ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
“ಈ ಕುರಿತು ಜೆಸ್ಕಾಂ ಮತ್ತು ನಗರಸಭೆ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಗಮನಕ್ಕೆ ತಂದ ಮೇಲೆಯೂ ವಿದ್ಯುತ್ ಸಂಪರ್ಕ ಹಾಗೂ ಡಬ್ಬಿಗಳ ಇಟ್ಟುಕೊಳ್ಳಲು ಅನುಮತಿ ಕೊಟ್ಟಿದ್ದಾರೆ. ಇವುಗಳನ್ನು ಹಾಕಿದ್ದರಿಂದ ಕಚೇರಿಗಳ ನಾಮಫಲಕಗಳೂ ಕಾಣದಂತೆ ಡಬ್ಬದಂಗಡಿಗಳು ತಲೆ ಎತ್ತಿವೆ.
ಅಲ್ಲದೆ ಈ ಡಬ್ಬಿಗಳಲ್ಲಿರುವವರು ಕಸ ಕಡ್ಡಿಯನ್ನು ಗುಡಿಸಿ ಚರಂಡಿಗೆ ತುಂಬುತ್ತಿದ್ದಾರೆ. ಮೊದಲೇ ನಗರಸಭೆಯಲ್ಲಿ ಪೌರಕಾರ್ಮಿಕರ ಕೊರತೆ ಇದೆ. ಅದರಲ್ಲೂ ಇವರು ಸಿಮೆಂಟ್ ಕಾಂಕ್ರೀಟ್ ಹಾಕಿ ಚರಂಡಿ ಮುಚ್ಚಿ ಮೇಲೆ ಡಬ್ಬಿಗಳನ್ನು ಇಟ್ಟುಕೊಂಡಿದ್ದರಿಂದ ಚರಂಡಿಗಳು ಮುಚ್ಚಿಹೋಗಿವೆ. ಇದೇ ರಸ್ತೆಯಲ್ಲಿ ಅಧಿಕಾರಿಗಳು ಸಂಚರಿಸುತ್ತಿದ್ದರೂ ಕಣ್ಣಿಗೆ ಕಾಣುತ್ತಿಲ್ಲವೇ” ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ.
“ಈ ಡಬ್ಬದ ಅಂಗಡಿಗಳು ದಲ್ಲಾಳಿಗಳ ಅಡ್ಡಗಳಾಗಿವೆ. ಸರ್ಕಾರಿ ಕಚೇರಿಗೆ ಬರುವ ಮುಗ್ದ ಗ್ರಾಮೀಣ ಜನರಿಗೆ ಕೆಲಸ ಮಾಡಿಕೊಡುವುದಾಗಿ ಹೇಳಿ ಸಾಲ ಸೌಲಭ್ಯ ಒದಗಿಸಿಕೊಡುವುದಾಗಿ ಹೇಳಿ ಅವರಿಂದ ರಾಜಾರೋಷವಾಗಿ ಹಣ ಪೀಕುತ್ತಿದ್ದಾರೆ. ಇದರಿಂದ ಬಡ ಜನತೆ ಹಣ ಕಳೆದುಕೊಂಡು ಹತಾಶರಾಗುತ್ತಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಇಂಡಿ ಪ್ರತ್ಯೇಕ ಜಿಲ್ಲೆ ರಚನೆ ಮತ್ತು ಆರ್ಟಿಕಲ್ 371(ಜೆ) ಸೇರ್ಪಡೆಗೆ ಆಗ್ರಹ
“ನಾಯಿಕೊಡೆಗಳಂತೆ ತೆಲೆ ಎತ್ತಿರುವ ಡಬ್ಬಿಗಳನ್ನು ತುರ್ತಾಗಿ ತೆರವು ಮಾಡಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಡೆಯಬೇಕು, ಮುಗ್ದ ಜನರಿಗೆ ಆಗುತ್ತಿರುವ ವಂಚನೆಯನ್ನು ತಡೆಗಟ್ಟಬೇಕು. ಇಲ್ಲವಾದಲ್ಲಿ ನಗರಸಭೆ ಕಚೇರಿಗೆ ಜಾಲಿ ಮುಳ್ಳುಗಳನ್ನು ಬಡಿದು ಬೃಹತ್ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಸಿದ್ದಾರೆ.