ನಾನು ಮುಖ್ಯಮಂತ್ರಿಯಾಗಿದ್ದಾಗ ನಡೆದ ಒಕ್ಕಲಿಗರ ಕಾರ್ಯಕ್ರಮದಲ್ಲಿ ಆಡಿದ ಒಂದು ಮಾತಿನಿಂದ ಸಿಎಂ ಸ್ಥಾನವನ್ನೇ ಕಳೆದುಕೊಂಡೆ. ಅಂದು ನಾನು ಆಡಿದ ಒಂದು ಮಾತು ನನ್ನ ಮುಖ್ಯಮಂತ್ರಿ ಸ್ಥಾನಕ್ಕೆ ಮುಳುವಾಯಿತು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಹೇಳಿದ್ದಾರೆ.
ದಕ್ಷಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದ ಒಕ್ಕಲಿಗ ಸಮುದಾಯದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ನಾನು ಮುಖ್ಯಮಂತ್ರಿಯಾದ ಸಮಯದಲ್ಲಿ ನಡೆದ ಕಾರ್ಯಕ್ರಮದಲ್ಲಿ, ‘ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿ, ಆದಿಚುಂಚನಗಿರಿ ಸ್ವಾಮೀಜಿ ಆಶೀರ್ವಾದ ಪಡೆದು ರಾಜ್ಯದ ಮುಖ್ಯಮಂತ್ರಿಯಾದೆ’ ಎಂದಿದ್ದೆ. ಆ ಮಾತೇ ನನಗೆ ಮುಳುವಾಯಿತು. ನನಗೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಯಪ್ಪಾ ಎಂದು ಪಕ್ಷದ ಹಿರಿಯರು ಹೇಳಿದರು” ಎಂದು ಹೇಳಿದ್ದಾರೆ. ಆ ಮೂಲಕ ಬಿಜೆಪಿ ಹೈಕಮಾಂಡ್‌ಗೆ ಕುಟುಕಿದ್ದಾರೆ.
“ಈಗ ಪ್ರಾಮಾಣಿಕ ರಾಜಕಾರಣಕ್ಕೆ ಬೆಲೆಯಿಲ್ಲ. ಹರಕು ನಾಲಿಗೆ, ಹಣ ಹಾಗೂ ಗುಂಪುಗಾರಿಕೆಯ ರಾಜಕೀಯ ನಡೆಯುತ್ತಿದೆ. ಮುಂದೆ ಯಾವುದೇ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತೇನೆ” ಎಂದು ಅವರು ಹೇಳಿದ್ದಾರೆ.
ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಅಶ್ವತ್ಥ ನಾರಾಯಣ, “ಹಿಜಾಬ್ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರ ಸರಿಯಿಲ್ಲ. ಮಕ್ಕಳನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಯತ್ನಿಸುತ್ತಿದ್ದಾರೆ. ಮಕ್ಕಳಲ್ಲಿ ವ್ಯತ್ಯಾಸ ಇರಬಾರದು. ಶಾಲೆಯಲ್ಲಿ ಎಲ್ಲ ಮಕ್ಕಳು ಒಂದಾಗಿರಬೇಕು. ಆ ಉದ್ದೇಶದಿಂದ ಸಮವಸ್ತ್ರ ನಿಯಮ ಇರುವುದು” ಎಂದು ಹೇಳಿದ್ದಾರೆ.