ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಯಚೂರು ಜಿಲ್ಲೆಯ ಮುಸ್ಲಿಂ ಮುಖಂಡರು ಒತ್ತಾಯಿಸಿದ್ದಾರೆ.
“ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ನಗರದಲ್ಲಿ ಹನುಮಮಾಲಾ ವಿಸರ್ಜನೆ ಯಾತ್ರೆಯಲ್ಲಿ ಭಾಗವಹಿಸಿ ಸಭೆಯಲ್ಲಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್ ʼಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್ ಗಂಡ ಇಲ್ಲʼ ಎಂದು ಕೀಳಾಗಿ ಮಾತನಾಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗಿದ್ದು, ಸಮಾಜದ ಮಹಿಳೆಯರಿಗೆ ಮತ್ತು ಇಡೀ ಸಮಾಜಕ್ಕೆ ಮಾಡಿದ ಅವಮಾನವಾಗಿದೆ” ಎಂದು ಮುಸ್ಲಿಂ ಮುಖಂಡರು ಆರೋಪಿಸಿದರು.
“ಮಹಿಳೆಯರ ಘನತೆಗೆ ಧಕ್ಕೆ ಉಂಟು ಮಾಡಿ ಧರ್ಮಗಳ ನಡುವೆ ವೈಷಮ್ಯ ಉಂಟು ಮಾಡಿ, ದೊಂಬಿ, ಗಲಭೆಗಳನ್ನುಂಟು ಮಾಡುವ ಉದ್ದೇಶದಿಂದ ಮಾತನಾಡಿದ್ದಾರೆ. ಕೂಡಲೇ ಪ್ರಭಾಕರ್ ಭಟ್ ಹಾಗೂ ಸಂಘಟಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು” ಎಂದು ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಕಲ್ಲಡ್ಕ ಪ್ರಭಾಕರ ಭಟ್ ಬಂಧನಕ್ಕೆ ಕಾಂಗ್ರೆಸ್ ಒತ್ತಾಯ
“ದೇಶದಲ್ಲಿ ದ್ವೇಷ ಭಾಷಣ ಮಾಡುವ ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಬೇಕೆಂದು ರಾಜ್ಯ ಸರ್ಕಾರ ಸೂಚನೆ ನೀಡಿದರೂ ಈವರೆಗೆ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಾಂಗ್ರೆಸ್ ವಕ್ತಾರ, 371(ಜೆ) ಹೋರಾಟಗಾರ ರಜಾಕ್ ಉಸ್ತಾದ್, ಅಜೀಜ್, ಸೈಯದ್ ಸೇರಿದಂತೆ ಇತರರು ಇದ್ದರು.
ವರದಿ : ಸಾದಿಕ್ ಪಾಷಾ