ಪ್ರತಿ ವರ್ಷದಂತೆ ಈ ವರ್ಷವೂ ಜನವರಿ 21 ರಂದು ಸರ್ಕಾರದಿಂದಲೇ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇದೇ ಡಿಸೆಂಬರ್ 27 ರಿಂದ ಜನವರಿ 18ರವರೆಗೆ ನಿರಂತರವಾಗಿ ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ಜನಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಯಾದಗಿರಿ ಜಿಲ್ಲೆ ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಸಾವೂರ್ ಗ್ರಾಮದಲ್ಲಿ ಚಾಲನೆ ನೀಡಿದ್ದಾರೆ.
ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಗೆ ಪೂಜೆ ಸಲ್ಲಿಸಿ, ಕರ್ನಾಟಕ ಪ್ರದೇಶ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಹಸಿರು ಧ್ವಜ ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
“ರಾಜ್ಯ ಸರ್ಕಾರ ಅಂಬಿಗರ ಚೌಡಯ್ಯ ನಿಗಮ ಮಾಡಿದೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಿಲ್ಲ. ಆದ್ದರಿಂದ ಈ ಬಾರಿ ನಿಗಮಕ್ಕೆ ₹500 ಕೋಟಿ ಅನುದಾನ ನೀಡಬೇಕು” ಎಂದು ಉಮೇಶ್ ಕೆ ಮುದ್ನಾಳ್ ಆಗ್ರಹಿಸಿದರು.
“ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಈ ಭಾಗದಲ್ಲಿ ಅತಿಹೆಚ್ಚು ಕಡುಬಡವರಿದ್ದು, ಅರ್ಜಿ ಸಲ್ಲಿಸಿದರೂ ಸಾಲ ಸೌಲಭ್ಯ ಸಿಗದೇ ಇರುವುದರಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಜನವರಿ 29ರಂದು ವಿವಿಧ ಕಾಮಗಾರಿಗಳಿಗೆ ಸಿಎಂ ಚಾಲನೆ
“ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣಿಗಳಿಗೆ ಸಮಾಜ ನೆನಪಾಗುತ್ತದೆ. ಆದರೆ ಚುನಾವಣೆ ನಂತರ ಸೌಲಭ್ಯ ಕೊಡಿಸುವ ಕಾಳಜಿ ಇಲ್ಲದಂತಾಗಿದೆ” ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ನಾಗಪ್ಪ, ಯಂಕಪ್ಪ ಕೌಳೂರು, ಶರಣಪ್ಪ ಮಕ್ತಲ್, ಓಂಕಾರಪ್ಪ ಮಕ್ತಲ್, ಕುಮುಲಪ್ಪ ಮಕ್ತಲ್, ವೆಂಕಟೇಶ, ಬಸವರಾಜ, ಭೀಮಣ್ಣ, ಅಕ್ಬರ್, ಬನ್ನಪ್ಪ, ಪ್ರಭು ಮಕ್ತಲ್, ಬಸವರಾಜ, ದೊಡ್ಡಪ್ಪ, ಮರೆಪ್ಪ, ದೇವಪ್ಪ, ಶರಣಪ್ಪ, ಭೀಮರಡ್ಡಿ, ಚಂದ್ರಡ್ಡಿ, ಶಿವು ಸೇರಿದಂತೆ ನಿಜಶರಣ ಅಂಬಿಗರ ಚೌಡಯ್ಯನ ಸಂಘದ ಪದಾಧಿಕಾರಿಗಳು, ವಿಠಲ್ ಹೇರೂರ ಅಭಿಮಾನಿಗಳು ಇದ್ದರು.