ಮುಸ್ಲಿಂ ಹೆಣ್ಣು ಮಕ್ಕಳ ಬಗ್ಗೆ ಸಂಘಪರಿವಾರದ ಮುಖಂಡ ಪ್ರಭಾಕರ್ ಭಟ್ ನೀಡಿರುವ ಹೇಳಿಕೆ ಖಂಡನೀಯ. ಹೆಣ್ಣು ಮಕ್ಕಳಿರುವ ಯಾವುದೇ ಜಾತಿ ಧರ್ಮದವರು ಇದನ್ನ ಒಪ್ಪಲು ಸಾಧ್ಯವಿಲ್ಲ ಎಂದು ಸಮಾನ ಮನಸ್ಕರ ಸಂಘಟನೆಗಳು ಹೇಳಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕಾಂಗ್ರೆಸ್, ಸಿಪಿಐಎಂ, ದಸಂಸ, ರೈತ ಸಂಘ ಸೇರಿದಂತೆ ಸಮಾನ ಮನಸ್ಕರ ಸಂಘಟನೆಗಳ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. “ಪ್ರಭಾಕರ್ ಭಟ್ ಹೇಳಿಕೆ ಸಮಗ್ರ ಮಹಿಳೆಯರಿಗೆ ಮಾಡಿದ ಅವಮಾನ. ಮಹಿಳೆಯರ ಮನಸ್ಸಿಗೆ ನೋವಾಗುವ ಆತನ ಹೇಳಿಕೆಯನ್ನು ನಾವು ಖಂಡಿಸುತ್ತೇವೆ” ಎಂದು ಮಾಜಿ ಶಾಸಕ ರಮಾನಾಥ್ ರೈ ಹೇಳಿದ್ದಾರೆ.
“ಪ್ರಭಾಕರ್ ಭಟ್ ಅನೇಕ ಬಾರಿ ಪ್ರಚೋದನಾಕಾರಿ ಮಾತುಗಳನ್ನಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡ ಬಳಿಕ, ಇಂತಹ ಕೋಮುವಾದಿಗಳು ಏನು ಮಾಡಬೇಕೆಂದು ಗೊತ್ತಾಗದಂತಾಗಿದ್ದಾರೆ. ಹಾಗಾಗಿ, ಕೋಮು ಪ್ರಚೋದನೆ ಮಾಡುವ ಭಾಷಣ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಆತನನ್ನು ಬಂಧಿಸಬೇಕೆಂದು ಎಲ್ಲೆಡೆ ಒತ್ತಡಗಳಿವೆ. ತಡಮಾಡದೆ ಆತನನ್ನು ಬಂಧಿಸಬೇಕು. ಆತನ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
“ಹಿಂದುಗಳ ಹೆಣ್ಣು ಮಕ್ಕಳ ಡ್ರೆಸ್ ಕೋಡ್ಅನ್ನ ಅಪಮಾನಿಸುವ ಕೆಲಸವನ್ನೂ ಪ್ರಭಾಕರ್ ಭಟ್ ಮಾಡಿದ್ದಾರೆ. ಎಲ್ಲ ಭಾಷೆ, ಸಮುದಾಯ, ಧರ್ಮದ ಜನರು ಆತನ ಬಂಧನಕ್ಕೆ ಆಗ್ರಹಿಸುತ್ತಿದ್ದಾರೆ” ಎಂದು ಒತ್ತಾಯಿಸಿದ್ದಾರೆ.