ವಿಜಯಪುರ ನಗರದಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಫುಟ್‌ಪಾತ್‌ಗಳು ಮಾಯವಾಗಿ ಪಾರ್ಕಿಂಗ್ ಸಮಸ್ಯೆ ಜನರಿಗೆ ತಲೆಬಿಸಿಉಂಟು ಮಾಡಿದೆ.
ಗೋಲಗುಮ್ಮಟ ಸೇರಿದಂತೆ ನಗರದಲ್ಲಿರುವ ಹಲವು ಪಾರಂಪರಿಕ ತಾಣಗಳಿಗೆ ಪ್ರವಾಸಿಗರು ಹೆಚ್ಚ ಭೇಟಿ ನೀಡುತ್ತಾರೆ. ಆದರೆ, ಇಲ್ಲಿ ಸಮರ್ಪಕವಾದ ಪಾರ್ಕಿಂಗ್ ಸ್ಥಳ ಇಲ್ಲದೇ ರಸ್ತೆಗಳೇ ಪಾರ್ಕಿಂಗ್ ಸ್ಥಳಗಳಾಗಿ ಬದಲಾಗುತ್ತಿವೆ. ಇದರಿಂದ ನಗರದ ರಸ್ತೆಗಳು ವಾಹನ ದಟ್ಟಣೆಯಿಂದ ಬಿಜಿಗುಡುತ್ತಿವೆ.
ವಿಜಯಪುರ ಸಂಚಾರ ಪೊಲೀಸರು, ನಗರಪಾಲಿಕೆ, ನಗರಾಭಿವೃದ್ದಿ ಪ್ರಾಧಿಕಾರದವರು ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ರೂಪಿಸುವ ಬದಲು ಕಂಡು ಕಾಣದಂತೆ ಸುಮ್ಮನೇ ಇದ್ದಾರೆ. ವಿಜಯಪುರದ ಜನತೆಯೂ ನಡೆದಂತೆ ನಡೆಯಲಿ ಜೀವನ ಎಂದುಕೊಂಡು ಮೌನಕ್ಕೆ ಜಾರಿದ್ದಾರೆ. ಇಲ್ಲಿಗೆ ಬರುವ ಪ್ರವಾಸಿಗರು ಮಾತ್ರ ಆಡಳಿತವನ್ನು ಶಪಿಸಿ ವಿಜಯಪುರದ ಅಪಸವ್ಯಗಳ ಗುಣಗಾನ ಮಾಡುತ್ತಿದ್ದಾರೆ.
ಓಡಾಡಲು ಜನರ ಹರಸಾಹಸ
ವಾಹನಗಳನ್ನು ಪಾರ್ಕ್‌ಮಾಡುವುದೇ ವಾಹನ ಸವಾರರಿಗೆ ಒಂದು ದೊಡ್ಡ ತಲೆನೋವಾಗಿದೆ. ವಾಹನಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದ್ದು ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲ್ಲಿಸಲು ಸಾರ್ವಜನಿಕರು ಪರದಾಡುವಂತಾಗಿದೆ. ಇನ್ನು ಕೆಲವರು ತಮ್ಮ ವಾಹನಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಿಸುವುದರಿಂದ ಪ್ರತಿದಿನ ಸುಗಮ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದ್ದು ಪಾದಾಚಾರಿಗಳು ರಸ್ತೆ ದಾಟಲು ಹರಸಾಹಸ ಪಡುವಂತಾಗಿದೆ.
ನಗರದ ಹೃದಯ ಭಾಗದಲ್ಲಿ ಬಹುಮಹಡಿ ಕಟ್ಟಡಗಳು ತಲೆ ಎತ್ತಿವೆ, ಸಿದ್ದೇಶ್ವರ ಗುಡಿ ರಸ್ತೆ, ಗಾಂಧಿ ವೃತ್ತ ಸಮೀಪ, ಬಸ್ ನಿಲ್ದಾಣ, ಗೋಳಗುಮ್ಮಟ ಹತ್ತಿರ ಈಗ ಬಹುಮಹಡಿ ಕಟ್ಟಡಗಳಿದ್ದು, ವಿವಿಧ ಹೊಟೆಲ್‌ಗಳು, ಆಸ್ಪತ್ರೆಗಳು ಹಾಗೂ ಮಳಿಗೆಗಳು ತಲೆ ಎತ್ತಿವೆ. ಕಟ್ಟಡಗಳ ಕೆಳ ಮಹಡಿಯಲ್ಲಿ ಪಾರ್ಕಿಂಗ್‌ಗೆ ಜಾಗ ಮೀಸಲಿಡಬೇಕು ಎನ್ನಲಾಗುತ್ತದೆ. ಆದರೆ, ಪಾರ್ಕಿಂಗ್‌ಗೆ ಮೀಸಲಿಟ್ಟ ಜಾಗವನ್ನು ಕೆಲ ವಾಣಿಜ್ಯ ಮಳಿಗೆ ಮಾಲೀಕರು ವಾಣಿಜ್ಯ ಉದ್ದೇಶಕ್ಕೆ ಬಳಸಿ ಕೊಂಡಿರುವುದರಿಂದ ಮಳಿಗೆಯ ಮುಂಭಾಗದಲ್ಲಿ ವಾಹನಗಳು ನಿಲ್ಲಿಸುತ್ತಿದ್ದಾರೆ. ಕೆಲವು ವಾಣಿಜ್ಯ ಮಳಿಗೆಗಳಲ್ಲಿ ಪಾರ್ಕಿಂಗ್‌ಗೆ ಸ್ಥಳಾವಕಾಶವೇ ಇಲ್ಲ. ಈ ಕಾರಣಕ್ಕೆ ಸವಾರರು ರಸ್ತೆ ಬದಿ ವಾಹನಗಳನ್ನು ನಿಲ್ಲಿಸಿ ಖರೀದಿಗೆ ತೆರಳುತ್ತಿದ್ದಾರೆ. ಇದರಿಂದ ಇತರ ವಾಹನ ಸವಾರರಿಗೆ ಮತ್ತು ಓಡಾಡುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಎಲ್ಲೆಲ್ಲಿ ಸಮಸ್ಯೆ
ನಗರದ ಗಾಂಧಿವೃತ್ತ, ಎಂ.ಜಿ ರಸ್ತೆ, ಸಿದ್ದೇಶ್ವರ ಗುಡಿ ರಸ್ತೆ, ಸಿಂದಗಿ ರಸ್ತೆ, ಬಾಗಲಕೋಟೆ ರಸ್ತೆ, ಮಿನಾಕ್ಷಿಚೌಕ್, ರಾಮಮಂದಿರ ರಸ್ತೆ, ಕಿರಾಣಿ ಬಜಾರ್, ಸರಾಫ್ ಬಜಾರ, ಚೆಮ್ಮಮ್ಮ ಮಾರ್ಕೆಟ್, ಕೆನರಾ ಬ್ಯಾಂಕ್, ವಿಠ್ಠಲ ಮಂದಿರ ರಸ್ತೆ, ಹಳೆ ತಹಶೀಲ್ದಾರ ಕಚೇರಿ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸೂಕ್ತ ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲದೆ ಇರುವ ಕಾರಣ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಸಾರ್ವಜನಿಕರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ನಗರದಲ್ಲಿ ಜಿಲ್ಲಾಮಟ್ಟದ ಸರ್ಕಾರಿ ಕಚೇರಿಗಳಿರುವ ಕಾರಣ ಜಿಲ್ಲೆಯ ವಿವಿಧ ಭಾಗಗಳಿಂದ ಜನರು ಸರ್ಕಾರಿ ಕಚೇರಿಗಳಿಗೆ ಬರುವುದು ಸಾಮಾನ್ಯ, ಆದರೆ, ಜಿಲ್ಲಾಧಿಕಾರಿ ಕಚೇರಿ ಎದುರು ಹಳೆ ತಹಶಿಲ್ದಾರ ಕಚೇರಿ, ಹೆಸ್ಕಾಂ ಕಚೇರಿ, ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ, ನಾಡ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯಿಲ್ಲದೆ ಜನರು ಕಚೇರಿಯ ಪ್ರವೇಶ ದ್ವಾರಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಿದ್ದು ಇದರಿಂದ ಕಚೇರಿಗೆ ನಡೆದುಕೊಂಡು ಬರುವವರಿಗೂ ಕಚೇರಿ ಪ್ರವೇಶಿಸಲು ಒದ್ದಾಡಬೇಕಾಗಿದೆ.
ವ್ಯಾಪಾರ ಕೇಂದ್ರವಾದ ಫುಟ್ ಪಾತ್
ನಗರದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಂದ ಫುಟ್‌ಪಾತ್‌ಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಆದರೆ, ಲಕ್ಷಾಂತರ ರೂಪಾಯಿ ಅನುದಾನದಲ್ಲಿ ನಿರ್ಮಾಣವಾಗಿರುವ ಫುಟ್‌ಪಾತ್‌ಗಳು ವ್ಯಾಪಾರ ಕೇಂದ್ರವಾಗಿ ಮಾರ್ಪಟ್ಟಿವೆ.
ನಗರದ ಮಾರುಕಟ್ಟೆಯ ಹೃದಯ ಭಾಗವಾಗಿರುವ ಗಾಂಧಿಚೌಕ್ ಸುತ್ತಮುತ್ತ, ವಿಠ್ಠಲ ಮಂದಿರ ರಸ್ತೆ, ಬಸ್ ನಿಲ್ದಾಣ ಹತ್ತಿರ, ಕಿತ್ತೂರು ಚೆನ್ನಮ್ಮ ಮಾರುಕಟ್ಟೆಗಳಲ್ಲಿ ಹಾಗೂ ಭಾನುವಾರ ಸಂತೆಯ ಸಮಯದಲ್ಲಿ ಲಿಂಗದಗುಡಿ, ಜಲನಗರದ ರಸ್ತೆಯ ಬದಿಯಲ್ಲಿ ವ್ಯಾಪಾರ ವಹಿವಾಟು ನಡೆಯುತ್ತದೆ. ಇಲ್ಲಿನ ರಸ್ತೆಗಳು, ಫುಟ್‌ಪಾತ್‌ಗಳು ಮಾರುಕಟ್ಟೆಯಾಗಿ ಬದಲಾಗಿದೆ.
ರಸ್ತೆಯುದ್ದಕ್ಕೂ ಬಟ್ಟೆ, ದಿನಸಿ, ತರಕಾರಿ ಹೀಗೆ ಸಾಲು ಸಾಲು ಅಂಗಡಿಗಳು ಕಂಡು ಬರುತ್ತಿದೆ. ವ್ಯಾಪಾರಸ್ಥರು ಫುಟ್‌ಪಾತ್‌ಗಳನ್ನು ಅತಿಕ್ರಮಿಸಿಕೊಳ್ಳುತ್ತಿರುವುದರಿಂದ ಪಾದಚಾರಿಗಳು ಅಪಾಯಕಾರಿಯಾಗಿ ರಸ್ತೆಯಲ್ಲೇ ನಡೆದು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ಜಲನಗರದಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆಯನ್ನೆ ನಿರ್ಮಿಸಿದ್ದರು ಸಹ, ಅದು ಈವರೆಗೂ ಬಳಕೆಗೆ ನೀಡಿಲ್ಲ. ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆ ಇದ್ದರೂ ವ್ಯಾಪಾರಸ್ತರು ಅಲ್ಲಿ ವ್ಯಾಪಾರ ನಡೆಸದೆ ರಸ್ತೆ ಬದಿಯಲ್ಲಿಯೇ ಕುಳಿತು ವ್ಯಾಪಾರ ನಡೆಸುತ್ತಿರುವುದು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿದೆ.
ಕಾರ್ಯಕ್ಷಮತೆ ತೋರಿಸಬೇಕಿದೆ ಟೈಗರ್
ವಿಜಯಪುರ ನಗರದ ಪ್ರಮುಖ ರಸ್ತೆಗಳಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲಿಸುವ ವಾಹನಗಳ ಮೇಲೆ ನಿಗಾ ಇಡಲು ಪೊಲೀಸ್ ಇಲಾಖೆಯ ಟೈಗರ್ ವಾಹನ ತನ್ನ ಕಾರ್ಯಕ್ಷಮತೆ ತೋರಿಸಬೇಕಿದೆ. ಕಾರು ಸೇರಿದಂತೆ ಎಲ್ಲಾ ರೀತಿಯ ವಾಹನಗಳು ಪಾರ್ಕಿಂಗ್ ಜಾಗದಲ್ಲಿ ಸರಿಯಾಗಿ ನಿಲ್ಲಿಸದೇ ಇದ್ದರೆ ಅವುಗಳನ್ನು ತೆಗೆದುಕೊಂಡು ಹೋಗಿ ದಂಡ ವಿಧಿಸುವ ಪರಿಪಾಠ ರೂಢಿಸಿಕೊಳ್ಳಬೇಕಿದೆ ಎನ್ನುವುದು ಸ್ಥಳೀಯರ ಸಲಹೆ.
ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸುವ ಜನರಿಗೆ ಟ್ರಾಫಿಕ್ ಪೊಲೀಸರ ಭಯವೇ ಇಲ್ಲದಂತಾಗಿದೆ. ಸಂಚಾರ ನಿಯಮಗಳನ್ನು ಗಾಳಿಗೆ ತೂರುವ ಜನರಿಗೆ ಪೊಲೀಸ್ ಇಲಾಖೆಯ ಟೈಗರ್ ತಕ್ಕ ಉತ್ತರ ನೀಡಬೇಕಿದೆ. ನಗರದಲ್ಲಿ ಪಾರ್ಕಿಂಗ್ ಸುವ್ಯವಸ್ಥೆಗೊಂಡರೆ ವಾಹನ ಸಂಚಾರ ದಟ್ಟನೆ ಕಡಿತಗೊಳ್ಳಲಿದೆ, ಈ ಬಗ್ಗೆ ಪೊಲೀಸ್ ವರಿಷ್ಠಾಕಾರಿ ಗಮನ ಹರಿಸಲಿ ಎನ್ನುತ್ತಾರೆ ಸಾರ್ವಜನಿಕರು.