ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ತಯಾರಿ ಬಗ್ಗೆ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಗುರುವಾರ ಪಕ್ಷದ ರಾಜ್ಯ ಪ್ರಮುಖ ನಾಯಕರ ವಿಶೇಷ ಸಭೆ ನಡೆಯಿತು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ ವೈ ವಿಜಯೇಂದ್ರ ಅವರು ಸಭೆಯ ನೇತೃತ್ವ ವಹಿಸಿ ಮಾತನಾಡಿ, “ರಾಜ್ಯದಲ್ಲಿ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಲು ಶ್ರಮಿಸುವ ಅಗತ್ಯವಿದೆ. ಗೆಲುವು ಸಾಧಿಸಲು ಹಿರಿಯರ ಮಾರ್ಗದರ್ಶನ ಅತ್ಯಗತ್ಯ” ಎಂದರು.
“ಎಲ್ಲರ ಸಹಕಾರ, ಮಾರ್ಗದರ್ಶನ ಬೇಕಿದೆ. ವೇದಿಕೆ ಮೇಲಿರುವ ಮತ್ತು ಸಭೆಯಲ್ಲಿ ಭಾಗವಹಿಸಿದ ಎಲ್ಲ ಹಿರಿಯರು ಪಕ್ಷದ ಭವಿಷ್ಯದ ದೃಷ್ಟಿಯಿಂದ ಮತ್ತು ಪಕ್ಷಕ್ಕೆ ಶಕ್ತಿ ತುಂಬಲು ಮಾರ್ಗದರ್ಶನ, ಸಲಹೆ, ಸೂಚನೆಗಳನ್ನು ಮುಕ್ತವಾಗಿ ಕೊಡಬೇಕು” ಎಂದು ವಿನಂತಿಸಿದರು.
“ಪಕ್ಷವು ಕರ್ನಾಟಕದಲ್ಲಿ ಇಷ್ಟು ಎತ್ತರಕ್ಕೆ ಬೆಳೆದು ನಿಲ್ಲಲು ಬಿ.ಎಸ್. ಯಡಿಯೂರಪ್ಪನವರು, ಸದಾನಂದಗೌಡರು, ಈಶ್ವರಪ್ಪನವರು, ಸಿ.ಟಿ.ರವಿಯವರು, ಬಸವರಾಜ ಬೊಮ್ಮಾಯಿಯವರು ಸೇರಿ ಅನೇಕ ಹಿರಿಯರು ಕಾರಣಕರ್ತರಾಗಿದ್ದಾರೆ. ಅಂತಹ ಎಲ್ಲ ಹಿರಿಯರು ಇಲ್ಲಿದ್ದಾರೆ. ಎಲ್ಲರ ಪರಿಶ್ರಮ ಪಕ್ಷದ ಬೆಳವಣಿಗೆಗೆ ಕಾರಣವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕನ್ನಡದ ಹೆಸರಲ್ಲಿ ಕಾನೂನು ಕೈಗೆತ್ತಿಕೊಂಡರೆ ಸಹಿಸಲ್ಲ: ಡಿ ಕೆ ಶಿವಕುಮಾರ್ ಎಚ್ಚರಿಕೆ
“ಪಕ್ಷದ ರಾಷ್ಟ್ರದ ಹಿರಿಯರ ಆಶೀರ್ವಾದದಿಂದ ಈ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ಎಲ್ಲ ಹಿರಿಯರ ಮಾರ್ಗದರ್ಶನ ಮತ್ತು ಯುವಕರ ಸಹಕಾರದಿಂದ ಮುಂಬರುವ ಲೋಕಸಭಾ ಚುನಾವಣೆಯನ್ನು ಗುರಿಯಾಗಿ ಇಟ್ಟುಕೊಳ್ಳೋಣ. ಲೋಕಸಭೆ ಚುನಾವಣೆ ಮಾತ್ರವಲ್ಲದೆ ನಂತರ ಬರುವ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ವಿಧಾನ ಪರಿಷತ್ ಸೇರಿ ಎಲ್ಲ ಚುನಾವಣೆಗಳಲ್ಲಿ ಕೂಡ ಬಿಜೆಪಿ ಗೆಲುವು ಸಾಧಿಸಲೇಬೇಕಿದೆ” ಎಂದು ತಿಳಿಸಿದರು.
ಈ ಸಭೆಯಲ್ಲಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮತ್ತಿತರರು ಇದ್ದರು.