ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭದ್ರತೆ, ವೇತನ ಹೆಚ್ಚಳ ಮತ್ತು ಸೇವೆ ಖಾಯಂಗೊಳಿಸುವಂತೆ ಒತ್ತಾಯಿಸಿ ಹಾಸನ ಜಿಲ್ಲಾ ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ನೇತೃತ್ವದಲ್ಲಿ ಅತಿಥಿ ಉಪನ್ಯಾಸಕರನ್ನು ಬೆಂಬಲಿಸಿ ಪ್ರತಿಭಟನೆ ನಡೆಸಿದರು.
ಹಾಸನ ನಗರದ ಗಂಧದ ಕೋಟಿ ಕಾಲೇಜಿನಿಂದ ಹೊರಟ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
“ಕಳೆದ 15ರಿಂದ 20 ವರ್ಷಗಳಿಂದ ಯಾವುದೇ ಸೌಲಭ್ಯಗಳಿಲ್ಲದೆ, ಕಾಯಮಾತಿ ಇಲ್ಲದೆ, ತಾತ್ಕಾಲಿಕ ವ್ಯವಸ್ಥೆಯಲ್ಲೇ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಸ್ಥಿತಿ ದುಸ್ತರವಾಗಿದೆ. ಅವರ ಕಾಯಮಾತಿ ಸೇರಿದಂತೆ ವೇತನ ಹೆಚ್ಚಳ ಮತ್ತು ಉದ್ಯೋಗ ಭದ್ರತೆಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದು, ಕಳೆದ ಹಲವು ಸರ್ಕಾರಗಳಿಗೆ ಮನವಿ ಸಲ್ಲಿಸಿದರೂ ಶಾಶ್ವತ ಪರಿಹಾರ ನೀಡದೆ ಕೇವಲ ತಾತ್ಕಾಲಿಕ ಪರಿಹಾರ ನೀಡಿ ಸರ್ಕಾರಗಳು ಮುಖ್ಯವಾದ ಬೇಡಿಕೆಗಳನ್ನು ಮರೆಮಾಚುತ್ತಾ ಬಂದಿವೆ” ಎಂದು ಪ್ರತಿಭಟನಾಕಾರರು ಆರೋಪಿಸಿದರು.
“ಪ್ರಸ್ತುತ ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಕಾಯಮಾತಿಗೆ ಕಾರ್ಯಯೋಜನೆ ರೂಪಿಸಲಾಗುವುದೆಂದು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದು, ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಇದು ಅತಿಥಿ ಉಪನ್ಯಾಸಕರಿಗೆ ಮಾಡಿದ ದ್ರೋಹವಾಗಿರುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಅತಿಥಿ ಉಪನ್ಯಾಸಕರಿಗೆ ಉದ್ಯೋಗದ ಭದ್ರತೆ ಒದಗಿಸಬೇಕು. ವೇತನ ಹೆಚ್ಚಳ ಮಾಡಬೇಕು ಜತೆಗೆ ಅವರ ಸೇವೆಯನ್ನು ಖಾಯಂಗೊಳಿಸುವ ಮೂಲಕ ಕೂಡಲೇ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಭೆ; 50 ಸಾಮೂಹಿಕ ವಿವಾಹದ ತೀರ್ಮಾನ
ಪ್ರತಿಭಟನೆಯಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಎಂ ಜಿ, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ಹಾಸನ್, ಡಿವೈಎಫ್‌ಐ ಜಿಲ್ಲಾಧ್ಯಕ್ಷ ವಾಸು, ಸಂಘಟನಾಕಾರುಗಳಾದ ಶಶಿ, ವಿವೇಕ್, ಸ್ವರೂಪ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.