ವಿವಿಧ ಬೇಡಿಕೆಗಳು ಈಡೇರಿಕೆಗೆ ಆಗ್ರಹಿಸಿ ಜನವರಿ 12 ರಂದು ಎಸ್‍ಎಫ್‍ಐ ಮತ್ತು ಜ್ಯಾತ್ಯಾತೀತ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಪಾರ್ಲಿಮೆಂಟ್ ಚಲೋ ನಡೆಸಲಾಗುತ್ತಿದೆ ಎಂದು ಎಸ್‍ಎಫ್‍ಐ ರಾಜ್ಯ ಪದಾಧಿಕಾರಿ ದಿಲೀಪ್ ತಿಳಿಸಿದರು.
ಕಲಬುರಗಿ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, “ಶಿಕ್ಷಣದ ಖಾಸಗೀಕರಣ, ವಾಣಿಜ್ಯೀಕರಣ ಮತ್ತು ಕೇಂದ್ರೀಕರಣವನ್ನು ನಿಲ್ಲಿಸಿ ಮತ್ತು ಸ್ನಾತಕೋತ್ತರ ಹಂತದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಬೇಕು. ಸರ್ವರಿಗೂ ಶಿಕ್ಷಣ ಮತ್ತು ಉದ್ಯೋಗವನ್ನು ಖಾತ್ರಿಪಡಿಸಲು ಭಗತ್ ಸಿಂಗ್ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯಿದೆಯನ್ನು ಜಾರಿಗೊಳಿಸಬೇಕು, ಹೊಸ ಶಿಕ್ಷಣ ನೀತಿ-2020, ನೀಟ್ ಮತ್ತು ಇತ್ತೀಚೆಗೆ ಜಾರಿಗೆ ತಂದ ಗುಜರಾತ್ ಸಾಮಾನ್ಯ ವಿಶ್ವವಿದ್ಯಾಲಯ ಕಾಯ್ದೆಯನ್ನು ರದ್ದುಗೊಳಿಸಬೇಕು” ಎಂದು ಆಗ್ರಹಿಸಿದರು.
“ಹಾಸ್ಟೆಲ್‍ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಮತ್ತು ಅವುಗಳ ವಿದ್ಯಾರ್ಥಿ ಸಾಮರ್ಥ್ಯವನ್ನು ಹೆಚ್ಚಿಸಬೇಕು, ನಿಯಮಿತ ವಿದ್ಯಾರ್ಥಿ ವೇತನಗಳು ಮತ್ತು ಫೆಲೋಶಿಪ್‍ಗಳನ್ನು ನೀಡಬೇಕು, ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಇತರ ಸರ್ಕಾರಿ ವಲಯಗಳಲ್ಲಿ ಖಾಲಿಯಿರುವ ಶಿಕ್ಷಕರ ಮತ್ತು ಉಪನ್ಯಾಸಕರ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು, ಪ್ರತಿ ನಿರುದ್ಯೋಗಿಗಳಿಗೆ ಕನಿಷ್ಠ 5000 ರೂ.ಮಾಸಿಕ ನಿರುದ್ಯೋಗ ಭತ್ಯೆ ನೀಡಬೇಕು” ಎಂದು ಒತ್ತಾಯಿಸಿದರು.
ಈ ಎಲ್ಲಾ ಬೇಡಿಕೆಗಳು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ʼಭಾರತ ರಕ್ಷಿಸಿ, ಬಿಜೆಪಿ ತಿರಸ್ಕರಿಸಿʼ ಎಂಬ ಘೋಷಣೆಯಡಿ ಪಾರ್ಲಿಮೆಂಟ್ ಚಲೋ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಿಜಾಬ್ ಹಿಂಜರಿಕೆ; ರಣತಂತ್ರವೋ, ಇಲ್ಲವೇ ಪಲಾಯನ ಮಂತ್ರವೇ?
ಈ ಸಂದರ್ಭದಲ್ಲಿ ಎಸ್ಎಫ್‌ಐ ಪದಾಧಿಕಾರಿಗಳಾದ ರಮೇಶ ವೀರಾಪೂರು, ಗಣೇಶ್ ರಾಥೋಡ್, ಗ್ಯಾನೇಶ್ ಕಡಗಡ್, ಸೋಮಶೇಖರ್, ಸುಜಾತಾ, ನಟರಾಜ್ ಜಿ, ಮೇಘಾ, ನಾಗಮ್ಮ, ಹುಲಿಗೆಮ್ಮ, ಮಾಲಾಶ್ರೀ, ಅಭಿಷೇಕ್, ಸರ್ವೇಶ್, ದರ್ಶನ್, ನಿಶಾಂತ್, ವರುಣ್, ಹರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.