ಧಾರ್ಮಿಕವಾಗಿ ದ್ವೇಷ ಬಿತ್ತುವ ಮತ್ತು ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸುವುದಿಲ್ಲ, ತನಿಖೆ ನಡೆಸಿದ ಬಳಿಕ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳುವುದಾಗಿ ಖುದ್ದು ಸರ್ಕಾರವೇ ಹೈಕೋರ್ಟ್‌ಗೆ ತಿಳಿಸಿದ ಹಿನ್ನೆಲೆಯಲ್ಲಿ, ಆರ್‌ಎಸ್‌ಎಸ್ ಮುಖಂಡ ಬಂಧನ ಭೀತಿಯಿಂದ ಪಾರಾಗಿದ್ದಾರೆ.
ಧಾರ್ಮಿಕವಾಗಿ ದ್ವೇಷ ಬಿತ್ತುವ ಮತ್ತು ಮುಸ್ಲಿಮ್ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ನಗರ ಠಾಣೆಯಲ್ಲಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಝೀರ್ ಚಿಕ್ಕನೇರಳೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಎಫ್‌ಐಆರ್ ರದ್ದು ಕೋರಿ ಕಲ್ಲಡ್ಕ ಪ್ರಭಾಕರ್ ಭಟ್ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ರಾಜೇಶ್ ರೈ ಕೆ ಅವರ ನೇತೃತ್ವದ ರಜಾಕಾಲೀನ ಪೀಠದ ಮುಂದೆ ಅರ್ಜಿಯು ವಿಚಾರಣೆಗೆ ಇಂದು ಪಟ್ಟಿಯಾಗಿತ್ತು.
ಇಂದು ಸಂಜೆ ಅರ್ಜಿಯ ವಿಚಾರಣೆ ನಡೆಸಿದಾಗ ಪ್ರಭಾಕರ ಭಟ್ ಪರ ವಕೀಲರು, “ಇದು ರಾಜಕೀಯ ಪ್ರೇರಿತ ದೂರು. ಆರೋಪಿ ವಯೋವೃದ್ದರು. ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮುಂದಿನ ದಿನಾಂಕದವರೆಗೆ ಬಂಧನ ಮಾಡದಂತೆ ನಿರ್ದೇಶನ ನೀಡಬೇಕು. ಪ್ರಭಾಕರ ಭಟ್ ವಿರುದ್ದ ಸರ್ಕಾರ ರೌಡಿ ಶೀಟ್ ಓಪನ್ ಮಾಡುವ ಸಾಧ್ಯತೆ ಇದೆ” ಎಂದು ತಿಳಿಸಿದರು.
ಈ ನಡುವೆ ದೂರುದಾರೆ ಪರ ವಕೀಲ ಎಸ್ ಬಾಲನ್ ಅವರು, “ಆರೋಪಿಯ ಹೇಳಿಕೆ ಗಮನಿಸಬೇಕು. ಮುಸ್ಲಿಂ ಮಹಿಳೆಯರಿಗೆ ಒಬ್ಬ ಗಂಡ ಅಲ್ಲ. ದಿನಕ್ಕೊಬ್ಬ ಗಂಡಂದಿರು ಎಂದಿದ್ದಾರೆ. ಇದು ಸಮಾಜದಲ್ಲಿ ಅಶಾಂತಿ ಹುಟ್ಟಿಸುತ್ತಿದೆ. ಎಲ್ಲ ಕಡೆ ಪ್ರತಿಭಟನೆಗಳು ನಡೆಯುತ್ತಿದೆ. ಆರೋಪಿ ಈ ಹಿಂದೆಯೂ ಇಂತಹ ಕೃತ್ಯ ಮಾಡಿದ್ದಾನೆ. ಸುಪ್ರಿಂ ಕೋರ್ಟ್ ಈ ರೀತಿ ದ್ವೇಷಭಾಷಣ ಮಾಡುವವರ ವಿರುದ್ದ ಹಲವು ಜಡ್ಜ್ ಮೆಂಟ್ ಕೊಟ್ಟಿದೆ. ಈಗ ಆರೋಪಿ ಬಗ್ಗೆ ಇನ್ನಷ್ಟೂ ತನಿಖೆ ಆಗಬೇಕಿದೆ. ಪೊಲೀಸರು ಹಾಕಿರುವ ಎಲ್ಲಾ ಸೆಕ್ಷನ್‌ಗಳು ಸರಿಯಾಗಿವೆ. ಈ ಪ್ರಕರಣದ ಸಂಪೂರ್ಣ ತನಿಖೆ ನಡೆಯಬೇಕು. ಇದರ ಹಿಂದೆ ಕೋಮುಗಲಭೆಯ ಹುನ್ನಾರ ಇದೆ. ಹಾಗಾಗಿ ಇದು ಸರಳ ಪ್ರಕರಣ ಅಲ್ಲ. ಹಾಗಾಗಿ ಕಾನೂನು ಅದರ ಕೆಲಸ ಮಾಡಲಿ” ಎಂದು ತಿಳಿಸಿದರು.
ಈ ನಡುವೆ ಸರ್ಕಾರದ ಪರ ವಕೀಲರು, ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಯ ಬಗ್ಗೆ ತನಿಖೆ ನಡೆಸಲಾಗುವುದು. ಸದ್ಯಕ್ಕೆ ಅವರನ್ನು ನಾವು ಬಂಧಿಸುವುದಿಲ್ಲ” ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರಿಂದ ಹೈಕೋರ್ಟ್, ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಬಂಧನದಿಂದ ಮಧ್ಯಂತರ ಪರಿಹಾರ ನೀಡಿತು.ಅಲ್ಲದೇ, ಪ್ರಕರಣವನ್ನು ಜ.9ಕ್ಕೆ ಮುಂದೂಡಿತು. ಸರ್ಕಾರವೇ ಆರೋಪಿಯನ್ನು ಬಂಧಿಸಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ ಮುಖಂಡ ಬಂಧನ ಭೀತಿಯಿಂದ ಪಾರಾಗಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿರುವ ದೂರುದಾರೆ, ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಝೀರ್ ಚಿಕ್ಕನೇರಳೆ, “ಧಾರ್ಮಿಕವಾಗಿ ದ್ವೇಷ ಬಿತ್ತುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ನ ಸ್ಪಷ್ಟ ನಿರ್ದೇಶನವಿದೆ. ಆದರೂ ಕೂಡ ಸರ್ಕಾರ ಈ ರೀತಿಯ ಯಾಕೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದೆ ಎಂಬುದು ಗೊತ್ತಿಲ್ಲ. ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪಿ ಪ್ರಭಾಕರ್ ಭಟ್ ಅವರನ್ನು ಸರ್ಕಾರ ಬಂಧಿಸಿ, ಕ್ರಮ ಕೈಗೊಳ್ಳಲಿ. ಸದ್ಯ ಪ್ರಕರಣವನ್ನು ನ್ಯಾಯಾಲಯವು ಜ.9ಕ್ಕೆ ಮುಂದೂಡಿದೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಹೆಚ್ಚು ಮಾತನಾಡುವುದು ಸೂಕ್ತವಲ್ಲ. ನಮ್ಮ ಕಾನೂನು ಹೋರಾಟ ಮುಂದುವರಿಯಲಿದೆ” ಎಂದು ತಿಳಿಸಿದ್ದಾರೆ.

ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸುವಂತೆ ರಾಜ್ಯಾದ್ಯಂತ ಪ್ರತಿಭಟನೆಗಳು ವ್ಯಾಪಕವಾಗಿ ಹೆಚ್ಚುತ್ತಿರುವ ನಡುವೆಯೇ ಸರ್ಕಾರವೇ ಖುದ್ದು, ಈ ರೀತಿಯ ಹೇಳಿಕೆಯನ್ನು ನ್ಯಾಯಾಲಯದಲ್ಲಿ ನೀಡಿದ್ದು, ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಈ ಬೆಳವಣಿಗೆಯ ಬಗ್ಗೆ ಫೇಸ್‌ಬುಕ್‌ನಲ್ಲಿ ಫೋಸ್ಟ್ ಹಾಕಿರುವ ಪತ್ರಕರ್ತ ನವೀನ್ ಸೂರಿಂಜೆ, ಸರ್ಕಾರದ ನಡೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
“ದೂರುದಾರರ ವಕೀಲರಾಗಿರುವ ಬಾಲನ್ ಅವರು ಅಮೋಘವಾಗಿ ವಾದ ಮಾಡಿಸುತ್ತಾ, ‘ಆರೋಪಿ ಪ್ರಭಾಕರ ಭಟ್ಟನನ್ನು ಬಂಧಿಸಿ ವಿಚಾರಣೆ ನಡೆಸುವ ಅಗತ್ಯಗಳು ಏನು?’ ಎಂಬುದನ್ನು ಹೈಕೋರ್ಟ್ ಗೆ ಮನವರಿಕೆ ಮಾಡುತ್ತಿದ್ದರು. ಆಗ ಸರ್ಕಾರ ಸುಮ್ಮನಿದ್ದರೂ ಸಾಕಿತ್ತು. ಆದರೆ ಸುಮ್ಮನೆ ಕೂರದ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ‘ನಾವು ಆರೋಪಿಯನ್ನು ಬಂಧಿಸಲ್ಲ’ ಎಂದು ವಾಗ್ದಾನ ನೀಡಿತು. ಈ ಕೇಸ್‌ಗಾಗಿ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ರಾತ್ರಿ ಹಗಲು ಹತ್ತಾರು ಸುಪ್ರಿಂ ಕೋರ್ಟ್ ಜಡ್ಜ್‌ಮೆಂಟ್ ಗಳನ್ನು ಅಧ್ಯಯನ ಮಾಡಿದ್ದ ಎಸ್ ಬಾಲನ್ ಪಟ್ಟ ಶ್ರಮ ನೀರುಪಾಲಾಯಿತು. ನಾವು ಕಳೆದ ಮೂರು ದಿನ ನಿದ್ದೆ ಬಿಟ್ಟು ಕೆಲಸ ಮಾಡಿದ್ದೂ ವೇಸ್ಟ್ ಆಯ್ತು. ಈಗ ಈ ರಾಜ್ಯದಲ್ಲಿ ಸರ್ಕಾರ ಇರಬಾರದಿತ್ತು. ಸರ್ಕಾರ ಇಲ್ಲದೇ ಇರುತ್ತಿದ್ದರೆ ನಾಳೆ ಆರೋಪಿ ಜೈಲಲ್ಲಿ ಇರುತ್ತಿದ್ದ.” ಎಂದು ಕಿಡಿಕಾರಿದ್ದಾರೆ.
ಏನಿದು ಪ್ರಕರಣ?
ಡಿಸೆಂಬರ್ 24ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದ ಹನುಮ ಜಯಂತಿ ಅಂಗವಾಗಿ ನಡೆದ ‘ಸಂಕೀರ್ತನಾ ಯಾತ್ರೆ’ಯಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ಕಲ್ಲಡ್ಕ ಪ್ರಭಾಕರ್ ಭಟ್ ನಿಂದನಾತ್ಮಕ ಹೇಳಿಕೆ ನೀಡಿದ್ದರು.
“ಹಿಂದೆ ತಲಾಕ್ ತಲಾಕ್ ಎಂದು ಹೇಳಿ ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡ ಬದಲಾಗ್ತಿದ್ದ. ನಿಮಗೆ ಪರ್ಮನೆಂಟ್ ಗಂಡನನ್ನ ಕೊಟ್ಟಿದ್ದು ಮೋದಿ ಸರ್ಕಾರ. ತಲಾಕ್ ರದ್ದು ಮಾಡಿ ನಿಮಗೆ ಗೌರವ ಕೊಟ್ಟಿದ್ದು ಇದೇ ಹಿಂದೂ ಧರ್ಮ” ಎಂದು ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಬಗ್ಗೆ ರಾಜ್ಯಾದ್ಯಂತ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಝೀರ್ ಚಿಕ್ಕನೇರಳೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.