ಪಕ್ಷದ ವಿರುದ್ಧವೇ ಹೇಳಿಕೆ ನೀಡುತ್ತಿರುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರವಾಗಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ ವಿ ಸದಾನಂದಗೌಡ, “ಶಾಸಕ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲು ನಮಗೆ ಅಧಿಕಾರವಿಲ್ಲ. ಅವರ ಬಗ್ಗೆ ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ” ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ವೇಳೆ ಯತ್ನಾಳ್ ಹೇಳಿದ್ದೆಲ್ಲವೂ ಸತ್ಯ, ಹಾಗಾಗಿ ಕ್ರಮ ಕೈಗೊಳ್ಳಲು ಬಿಜೆಪಿ ಹೆದರುತ್ತಿದೆ ಎಂಬ ಕಾಂಗ್ರೆಸ್‌ನವರ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ ಈ ರೀತಿ ಹೇಳಿಕೆ ನೀಡಿದರು.
“ನಿನ್ನೆ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಸಿದ್ದಾರೆ. ಆ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಬಗ್ಗೆ ಈಗಾಗಲೇ ತಿಳಿಸಿದ್ದಾರೆ. ಶಾಸಕ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲು ನಮಗೆ ಅಧಿಕಾರವಿಲ್ಲ. ಯತ್ನಾಳ್ ನೀಡುತ್ತಿರುವ ಹೇಳಿಕೆಯ ಬಗ್ಗೆ ನಾವು ಯಾರೂ ಕೂಡ ಇಲ್ಲಿ ಮಾತನಾಡುವ ಅವಶ್ಯಕತೆ ಇಲ್ಲ. ಅದನ್ನು ಕೇಂದ್ರದ ವರಿಷ್ಠರ ಗಮನಕ್ಕೆ ತಂದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿದ್ದಾರೆ” ಎಂದು ತಿಳಿಸಿದರು.
“ಶಾಸಕರು ಮತ್ತು ಅದರ ಮೇಲ್ಪಟ ಜವಾಬ್ದಾರಿ ಇರುವವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವುದಿದ್ದರೂ ಕೇಂದ್ರದ ನಾಯಕರೇ ತೆಗೆದುಕೊಳ್ಳಬೇಕು. ನಾವು ಏನಿದ್ದರೂ ಇಲ್ಲಿಯ ಬೆಳವಣಿಗೆಗಳ ಬಗ್ಗೆ ಮಾಹಿತಿಯನ್ನಷ್ಟೇ ಕೊಡಬಹುದು. ಹಾಗಾಗಿ, ಶಾಸಕ ಯತ್ನಾಳ್ ಅವರ ಹೇಳಿಕೆಗಳ ಬಗ್ಗೆ ನಾವು ಯಾರೂ ಮಾತನಾಡುವುದಿಲ್ಲ” ಎಂದು ಸದಾನಂದಗೌಡ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಯತ್ನಾಳ್ ಹೇಳಿದ್ದೆಲ್ಲವೂ ಸತ್ಯ, ಹಾಗಾಗಿ ಕ್ರಮ ಕೈಗೊಳ್ಳಲು ಬಿಜೆಪಿ ಹೆದರುತ್ತಿದೆ: ಸಚಿವ ಎಂ ಬಿ ಪಾಟೀಲ್
‘ಬಿಜೆಪಿಯವರ ದೌರ್ಬಲ್ಯವೆಲ್ಲವೂ ಯತ್ನಾಳ್ ಅವರ ಬಳಿಯಲ್ಲಿದೆ’ ಎಂಬ ಕಾಂಗ್ರೆಸ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಕಾಂಗ್ರೆಸ್‌ನವರಿಗೆ ಈಗ ಅಧಿಕಾರ ಸಿಕ್ಕಿ ಆರು ತಿಂಗಳಾಯಿತಷ್ಟೇ. ಅಷ್ಟರಲ್ಲೇ ಅವರ ಹಣೆಬರಹ ಎಲ್ಲವೂ ಜಗಜ್ಜಾಹೀರಾಗಿದೆ. ಯಾವುದೇ ಅಭಿವೃದ್ಧಿ ಕೆಲಸಕಾರ್ಯಗಳು ಆಗುತ್ತಿಲ್ಲ. ಪ್ರತಿಯೊಬ್ಬರೂ ಬೀದಿಗಿಳಿಯುವ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣ ಆಗಿದೆ. ಪೊಲೀಸ್ ಇಲಾಖೆಯನ್ನು ತಮ್ಮ ಕೈಯ್ಯಲ್ಲಿಟ್ಟುಕೊಂಡಿರುವುದರಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಇದೆಲ್ಲವನ್ನೂ ಜನರು ಅರ್ಥಮಾಡಿಕೊಂಡಿದ್ದಾರೆ” ಎಂದು ತಿಳಿಸಿದರು.
“ನಮ್ಮ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿಯ ಹೊಸ ತಂಡ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದೆ” ಎಂದು ಎಚ್ಚರಿಸಿದ ಸದಾನಂದಗೌಡ, “ನಮ್ಮ ಜಿಲ್ಲಾ ಘಟಕ, ಮಂಡಲ ಘಟಕಗಳು ರಚನೆಯಾದ ಬಳಿಕ ಯಾವ ಮಂತ್ರಿಯೂ ಕೂಡ ಬೀದಿಗಿಳಿಯುವ ಹಾಗಿಲ್ಲ” ಎಂದು ತಿಳಿಸಿದ್ದಾರೆ.