ಅತಿಥಿ ಉಪನ್ಯಾಸಕರ ಕಾಯಮಾತಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟವು ಮುಂದುವರಿದಿದ್ದು, ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ.
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಬೆಳಿಗ್ಗೆ 36ನೇ ದಿನದಂದು ಅತಿಥಿ ಉಪನ್ಯಾಸಕರು ಅರೆಬೆತ್ತಲೆಯಾಗಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು.
“ನಾವು ಅರೆಬೆತ್ತಲೆ ಪ್ರತಿಭಟನೆ ಮಾಡುತ್ತಿದ್ದೇವೆ. ಇಂದು ಶರ್ಟ್ ತೆಗೆದಿರಬಹುದು. ಆದರೆ ನಮ್ಮ ವಾಸ್ತವಿಕ ಜೀವನ ಅರೆಬೆತ್ತಲೆಯಾಗಿದೆ. ಈ ಅತಿಥಿ ಉಪನ್ಯಾಸಕ ಪದವೇ ಮೂಲಭೂತವಾಗಿ ನಮ್ಮ ಜೀವನಕ್ಕೆ ಶೋಷಣೆಯ ಒಂದು ಪ್ರತಿಕವಾಗಿ ಕಾಡುತ್ತಿದೆ. ಯಾಕೆಂದರೆ ನಮ್ಮಲ್ಲಿ ರ‍್ಯಾಂಕ್ ಬಂದವರಿದ್ದಾರೆ. ಪಿಹೆಚ್‌ಡಿ, ಎನ್‌ಇಟಿ, ಎಸ್‌ಎಲ್‌ಇಟಿ ಸೇರಿದಂತೆ ಗೋಲ್ಡ್ ಮೆಡಲ್ ಪಡೆದವರೂ ಇದ್ದಾರೆ. ಆದರೆ ಸರ್ಕಾರವು ತಾತ್ಕಾಲಿಕ ನೇಮಕಾತಿ ಎಂದು ಎಂಟು ತಿಂಗಳು, 10 ತಿಂಗಳ ಅವಧಿಗೆ ನಿಗದಿ ಮಾಡಿ ಪುಡಿಗಾಸು ನೀಡಿ ನಮ್ಮ ಬದುಕನ್ನೇ ಅರೆಬೆತ್ತಲೆ ಮಾಡಿದೆ” ಎಂದು ಆರೋಪಿಸಿದರು.
“ಕಳೆದ ಎರಡು ವರ್ಷಗಳಿಂದ ನಮಗೆ ವಿವಿಧ ಹಂತಗಳಲ್ಲಿ ಕನಿಷ್ಠ ₹26,000 ಹಾಗೂ ಗರಿಷ್ಠ ₹32,000 ಗೌರವಧನ ನೀಡಿ ದುಡಿಸಿಕೊಳ್ಳುತ್ತಿದೆ. ಖಾಯಂ ಉಪನ್ಯಾಸಕರಿಗೆ ಹಾಗೂ ನಮಗೂ ಒಂದೇ ಅವಧಿ ವ್ಯತ್ಯಾಸದ ಕಾರ್ಯಭಾರ ಹಂಚಿ ಬಿಟ್ಟಿ ಚಾಕರಿ ಮಾಡಿಸಿಕೊಳ್ಳುತ್ತಿರುವ ಸರ್ಕಾರವು ಖಾಯಂಗೊಳಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕೂಡಲೇ 11 ಸಾವಿರ ಮಂದಿ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
“ಹಲವು ರಾಜ್ಯಗಳಲ್ಲಿ ಹೊರಗುತ್ತಿಗೆ, ಸ್ಟಾಪ್ ಗ್ಯಾಪ್ ಅರೆಕಾಲಿಕ ಅತಿಥಿ ಉಪನ್ಯಾಸಕ, ಅತಿಥಿ ಶಿಕ್ಷಕರು ಹೀಗೆ ಹಲವು ಪದನಾಮಗಳ ಅಡಿಯಲ್ಲಿ ನೇಮಕ ಮಾಡಿಕೊಂಡು ಈಗ ಕಾಯಮಾತಿ ಮಾಡಿರುವ ನಿದರ್ಶನಗಳಿವೆ. ಅಂತೆಯೇ ಕರ್ನಾಟಕ ಸರ್ಕಾರವೂ ಈ ಅತಿಥಿ ಉಪನ್ಯಾಸಕ ಎಂಬ ಪದನಾಮಕ್ಕೆ ಮುಕ್ತಿ ಕೊಟ್ಟು ಖಾಯಂ ಮಾಡಿ ಈ ಅತಿಥಿ ಎಂಬ ಅರೆಬೆತ್ತಲೆ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು” ಎಂದು ಆಗ್ರಹಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಎಂ. ಕರೆಣ್ಣವರ್ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸುವುದಾಗಿ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಎಸ್‌ಎಫ್‌ಐ ಆಗ್ರಹ
ಪ್ರತಿಭಟನೆಯಲ್ಲಿ ಕೆ. ಶ್ಯಾಮ್ ಪ್ರಸಾದ್, ಸಿದ್ದೇಶ್, ಕಳಕಪ್ಪ ಚೌರಿ, ಮೋಹನ್, ಜಗದೀಶ್, ಹನುಮಂತಪ್ಪ, ಪ್ರವೀಣ್ ಕುಮಾರ್, ಸಂತೋಷ್ ಕುಮಾರ್, ವೀರೇಶ್, ಹರೀಶ್, ರಂಗನಾಥ್, ಶುಭ, ರೇಖಾ, ಲಕ್ಷ್ಮಿ, ಶ್ವೇತಾ ಜಗಳೂರು, ಸಮ್ರೀನ್ ಬಾನು, ಶ್ವೇತಾ ಹೊಳಲ್ಕೆರೆ, ಅನೀಸ್ ಫಾತೀಮಾ, ಸಮೀನಾ ಸೇರಿದಂತೆ ಬಹುತೇಕರು ಇದ್ದರು.