ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲಾ 28 ಸ್ಥಾನಗಳಲ್ಲೂ ಸ್ಪರ್ಧಿಸಲಿದೆ. ಜನವರಿ 6ಮತ್ತು 7ರಂದು ಸ್ಪರ್ಧಿಗಳ ಆಯ್ಕೆಗೆ ಸಂದರ್ಶನ ಆಯೋಜಿಸಲಾಗಿದೆ ಎಂದು ಕೆಆರ್‌ಎಸ್ ಯುವ ಘಟಕದ ರಾಜಾಧ್ಯಕ್ಷೆ ಜನನಿ ವತ್ಸಲಾ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಆಸಕ್ತ ಚುನಾವಣಾ ಸ್ಪರ್ಧಾಕಾಂಕ್ಷಿಗಳ ಸಂದರ್ಶನವನ್ನು ಬೆಂಗಳೂರಿನ ರಾಜಾಜಿನಗರದಲ್ಲಿರುವ ಕೆಆರ್‌ಎಸ್ ಪಕ್ಷದ ಕೇಂದ್ರ ಕಛೇರಿಯಲ್ಲಿ ನಡೆಯಲಿದೆ. ಟಿಕೆಟ್ ಹಂಚಿಕೆ ವಿಚಾರ ಹಾಗೂ ಇತರೆ ಹಲವು ಮಹತ್ವದ ವಿಷಯಗಳಿಗೆ ಸಂಬಂಧಿಸಿದಂತೆ ಈಗಾಗಲೇ ಡಿಸೆಂಬರ್ 23ರಂದು ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಅಭ್ಯರ್ಥಿಗಳ ಸಂದರ್ಶನವು ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆಯಲ್ಲಿದ್ದು, ಆಸಕ್ತರು ಸಂದರ್ಶನಕ್ಕೆ ಹಾಜರಾಗಬೇಕು. ಪಕ್ಷದ ಹಾಲಿ ಸದಸ್ಯರಿಗೆ ಐದು ಸಾವಿರ, ಹೊಸದಾಗಿ ಪಕ್ಷ ಸೇರಿ ಸಂದರ್ಶನಕ್ಕೆ ಹಾಜರಾಗುವವರಿಗೆ ಹತ್ತು ಸಾವಿರ ಸಂದರ್ಶನ ಶುಲ್ಕವಿರುತ್ತದೆ. ಸಂದರ್ಶನದ ನಂತರ ರಾಜ್ಯ ಸಮಿತಿಯು ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಹೆಚ್ಚಿನ ಮಾಹಿತಿಗಾಗಿ 96117 20802ಗೆ ಸಂಪರ್ಕಿಸಬಹುದು ಎಂದರು.
ಕೆಆರ್‌ಎಸ್ ಪಕ್ಷವು ಪಕ್ಷದ ಆರಂಭದಿಂದಲೂ ಎಲ್ಲಾ ಚುನಾವಣೆಗಳಲ್ಲಿ ಸ್ಪರ್ಧಿಸಿ, ನಿರಂತರವಾಗಿ ಜನರನ್ನು ತಲುಪುವ ಕೆಲಸ ಮಾಡುತ್ತಿದೆ. 2023ರ ಮೇನಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 195 ಕ್ಷೇತ್ರಗಳಿಂದ ಸ್ಪರ್ಧಿಸಿತ್ತು. ಪಕ್ಷವು ನಿರಂತರವಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ವ್ಯವಸ್ಥೆಯಲ್ಲಿನ ಅಕ್ರಮ, ಅನ್ಯಾಯ, ದುರಾಡಳಿತ, ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾ, ನಾಡಿನ ನೆಲ, ಜಲ, ಭಾಷೆಯ ಸಂರಕ್ಷಣೆಗಾಗಿ ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡುತ್ತಾ ಬಂದಿದೆ.
ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತಿಸುವವರು, ಅಕ್ರಮ ನಡೆಸದೆ ಚುನಾವಣೆ ಎದುರಿಸುವ, ದೇಣಿಗೆ ಮೂಲಕ ಚುನಾವಣಾ ಖರ್ಚು ವೆಚ್ಚವನ್ನು ಎದುರಿಸುವ ಮನಸ್ಥಿತಿ ಇರುವವರು, ಜನಪರ ಕಾಳಜಿ ಉಳ್ಳವರು, ಪ್ರಾದೇಶಿಕತೆ, ಒಕ್ಕೂಟ ವ್ಯವಸ್ಥೆಯಲ್ಲಿ ಹಾಗು ಪ್ರಮುಖವಾಗಿ ದೇಶದ ಸಂವಿಧಾನದಲ್ಲಿ ನಂಬಿಕೆ ಉಳ್ಳವರು ಕೆಆರ್‌ಎಸ್ ಪಕ್ಷ ಸೇರಿ, ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಬಿ. ತಿಪ್ಪೇಸ್ವಾಮಿ, ಜಿ.ಪಿ. ರಾಘವೇಂದ್ರ, ವೀರಭದ್ರಪ್ಪ, ಗುಡ್ಡಪ್ಪ, ಶಿವಣ್ಣ, ವಿಜಯಕುಮಾರ್ ಇತರರು ಇದ್ದರು.